ಕೇಂದ್ರ ಸರಕಾರಕ್ಕೆ ಆರ್ ಬಿಐ ನಿಧಿ ವರ್ಗಾವಣೆ ವಿರೋಧಿಸಿ ಊರ್ಜಿತ್ ಪಟೇಲ್ ರಾಜೀನಾಮೆ

Update: 2019-08-28 15:03 GMT

ಹೊಸದಿಲ್ಲಿ,ಆ.28: ಆರ್‌ಬಿಐ ಮೀಸಲು ಮೊತ್ತವನ್ನು ಕೇಂದ್ರಕ್ಕೆ ವರ್ಗಾಯಿಸುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಕಾರಣ ಊರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಕಳೆದ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು ಎಂದು ಕೇಂದ್ರೀಯ ಬ್ಯಾಂಕ್‌ನ ಬಂಡವಾಳ ರೂಪುರೇಶೆಯ ಪರಿಶೀಲನೆ ನಡೆಸಲು ರಚಿಸಲಾಗಿದ್ದ ಸಮಿತಿಯ ಸದಸ್ಯರು ಎನ್ ಡಿಟಿವಿಗೆ ತಿಳಿಸಿದ್ದಾರೆ.

ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಸಮಿತಿಯ ಸದಸ್ಯರಾಗಿರುವ ರಾಕೇಶ್ ಮೋಹನ್ ನೀಡಿರುವ ಈ ಹೇಳಿಕೆ, ಊರ್ಜಿತ್ ಪಟೇಲ್ ಅವರ ರಾಜೀನಾಮೆಯಲ್ಲಿ ತನ್ನಲ್ಲಿರುವ ಹೆಚ್ಚುವರಿ ಮೀಸಲು ಮೊತ್ತವನ್ನು ವರ್ಗಾಯಿಸುವಂತೆ ಆರ್‌ಬಿಐ ಮೇಲೆ ಕೇಂದ್ರ ಸರಕಾರ ಹಾಕುತ್ತಿದ್ದ ಒತ್ತಡ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಬಗ್ಗೆ ಈವರೆಗೆ ನೀಡಲಾದ ಮೊದಲ ಅಧಿಕೃತ ದೃಢೀಕರಣವಾಗಿದೆ.

ಕೇಂದ್ರ ಸರಕಾರಕ್ಕೆ ತನ್ನ ಹೆಚ್ಚುವರಿ ಮೀಸಲು ಬಂಡವಾಳದಿಂದ 1.76 ಲಕ್ಷ ಕೋ.ರೂ. ನೀಡಲು ನಿರ್ಧರಿಸಿರುವ ಆರ್‌ಬಿಐ ಕ್ರಮದ ಕುರಿತು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ಆರ್‌ಬಿಐಯ ಮಾಜಿ ಉಪ ಗವರ್ನರ್ ಆಗಿರುವ ರಾಕೇಶ್ ಮೋಹನ್ ಈ ಮಾಹಿತಿ ನೀಡಿದ್ದಾರೆ.

ಇದೆಲ್ಲವೂ ಆರಂಭವಾಗಿದ್ದು 2015-16ರ ಆರ್ಥಿಕ ಸಮೀಕ್ಷೆಯ ನಂತರ. ಆ ಸಮೀಕ್ಷೆಯಲ್ಲಿ ಆರ್‌ಬಿಐ ಬಳಿ ಹೆಚ್ಚುವರಿ ಮೀಸಲು ಬಂಡವಾಳ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ತಿಳಿಸಿದ್ದರು. ಇದರ ಪ್ರಮಾಣ ಮೂರರಿಂದ ಒಂಬತ್ತು ಲಕ್ಷ ಕೋ.ರೂ. ನಡುವಿನಲ್ಲಿದೆ. ಇದರ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಯಿತು ಮತ್ತು ಊರ್ಜಿತ್ ಪಟೇಲ್ ರಾಜೀನಾಮೆಗೂ ಕಾರಣವಾಯಿತು ಎಂದು ರಾಕೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News