ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಗುಂಪು ದಾಳಿ: ಓರ್ವ ಮೃತ್ಯು

Update: 2019-08-28 15:50 GMT

ಲಕ್ನೋ, ಆ.28: ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಗುಂಪು ದಾಳಿ ನಡೆದ ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಗುಂಪಿನಿಂದ ತೀವ್ರ ಹಲ್ಲೆಗೊಳಗಾದ ಓರ್ವ ಮೃತಪಟ್ಟರೆ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಸಂಭಾಲ್ ಜಿಲ್ಲೆಯ ಛಾಬ್ರ ಗ್ರಾಮದ ನಿವಾಸಿಗಳಾದ ರಾಜು ಮತ್ತು ರಾಮ ಅವತಾರ್ ಎಂಬ ಸಹೋದರರು ಅಸ್ವಸ್ಥನಾಗಿದ್ದ ಸಂಬಂಧಿ ಬಾಲಕನನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಜಾರಯ್ ಎಂಬ ಗ್ರಾಮದ ಮೂಲಕ ಇವರು ತೆರಳುತ್ತಿದ್ದಾಗ ಸ್ಥಳೀಯರು ಮಕ್ಕಳನ್ನು ಕದಿಯುವ ತಂಡ ಇದು ಎಂಬ ಶಂಕೆಯಲ್ಲಿ ಸ್ಥಳೀಯರು ತಡೆದಿದ್ದಾರೆ. ಸುಮಾರು 300 ಮಂದಿ ಒಟ್ಟುಸೇರಿ ರಾಜು ಮತ್ತು ರಾಮನನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಹಲ್ಲೆಕೋರರನ್ನು ಚದುರಿಸಿ, ಪ್ರಜ್ಞೆ ತಪ್ಪಿ ಬಿದ್ದಿದ್ದ ಸಹೋದರರನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ರಾಜು ಮೃತಪಟ್ಟಿದ್ದಾನೆ.

ರಾಮ ಅವತಾರ್ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ವೀಡಿಯೊ ದೃಶ್ಯ ಲಭಿಸಿದ್ದು ಇದರ ಆಧಾರದಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಇತರ 14 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಂಭಾಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ಯಮುನಾ ಪ್ರಸಾದ್ ಹೇಳಿದ್ದಾರೆ. ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಹರಿದಾಡುತ್ತಿದೆ. ಜನತೆ ಯಾವುದೇ ವದಂತಿಗೆ ಕಿವಿಗೊಡಬಾರದು. ಸಂದೇಹಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News