ಪಾಕ್ ಪಡೆಗಳಿಂದ ದಾಳಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಫ್ಘಾನ್ ದೂರು
ಕಾಬೂಲ್, ಆ. 28: ತನ್ನ ಭೂಭಾಗಗಳ ಮೇಲೆ ಪಾಕಿಸ್ತಾನದ ಸೇನೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಫ್ಘಾನಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದೆ. ಆಗಸ್ಟ್ 19 ಮತ್ತು 20ರ ನಡುವಿವ ಅವಧಿಯಲ್ಲಿ ಅಫ್ಘಾನಿಸ್ತಾನದ ಕುನಾರ್ ಪ್ರಾಂತದ ಮೇಲೆ ಪಾಕಿಸ್ತಾನದ ಸೇನೆಯು 200ಕ್ಕೂ ಅಧಿಕ ರಾಕೆಟ್‌ಗಳನ್ನು ಹಾರಿಸಿತ್ತು ಎಂದು ಅದು ಆರೋಪಿಸಿದೆ.
ಅಫ್ಘಾನಿಸ್ತಾನದ ನೆಲದ ಮೇಲೆ ಪಾಕಿಸ್ತಾನದ ಸೇನೆಯು ಪದೇ ಪದೇ ದಾಳಿಗಳನ್ನು ನಡೆಸುತ್ತಿದೆ ಎಂದು ಭದ್ರತಾ ಮಂಡಳಿಗೆ ಕಳೆದ ವಾರ ಬರೆದ ಪತ್ರದಲ್ಲಿ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿ ಆದಿಲಾ ರಾಝ್ ಆರೋಪಿಸಿದ್ದಾರೆ. ಫೆಬ್ರವರಿ 22ರಂದು ಬರೆದ ಇನ್ನೊಂದು ಅಧಿಕೃತ ಪತ್ರದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತೀರಾ ಇತ್ತೀಚೆಗೆ, ಅಂದರೆ ಆಗಸ್ಟ್ 19-20ರಂದು ನಡೆದ ಉಲ್ಲಂಘನೆಗಳ ಬಗ್ಗೆ ಹೇಳಿರುವ ಆದಿಲಾ ರಾಝ್, ‘‘ಪಾಕಿಸ್ತಾನದ ಸೇನಾ ಪಡೆಗಳು ಕುನಾರ್ ಪ್ರಾಂತದ ಶೆಲ್ಟನ್ ಜಿಲ್ಲೆಯ ಮೇಲೆ 200ಕ್ಕೂ ಅಧಿಕ ರಾಕೆಟ್‌ಗಳನ್ನು ಹಾರಿಸಿವೆ’’ ಎಂದರು.