ಉನ್ನಾವೊ ರೀತಿಯ ಮತ್ತೊಂದು ಅಪಘಾತ ಮರುಕಳಿಸಬಹುದು: ಹಿರಿಯ ವಕೀಲರ ಆತಂಕ

Update: 2019-08-29 03:54 GMT

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಎಲ್‍ಎಲ್‍ಎಂ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿಬೇಕು ಎಂದು ಹಲವು ಮಂದಿ ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ವಾಹನ ಅಪಘಾತದಂಥ ಘಟನೆ ಈ ಪ್ರಕರಣದಲ್ಲೂ ಮರುಕಳಿಸುವ ಭೀತಿ ಇದೆ ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾವಿಸಿದ ಹಿರಿಯ ವಕೀಲೆ ಶೋಭಾ, "ಉತ್ತರ ಪ್ರದೇಶ ಶಹಜಹಾನ್‍ಪುರದ ಕಾನೂನು ವಿದ್ಯಾರ್ಥಿನಿ, ಬಿಜೆಪಿ ಮುಖಂಡ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ಕಾಲೇಜು ಹಾಸ್ಟೆಲ್‍ನಿಂದ ನಾಪತ್ತೆಯಾಗಿದ್ದಾಳೆ" ಎಂದು ವಿವರಿಸಿದರು.

ಈ ಸಂಬಂಧ ವಕೀಲರ ಗುಂಪು, ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಬರೆದ ಪತ್ರವನ್ನು ಅವರು ಹಸ್ತಾಂತರಿಸಿದರು. ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. "ಕಾನೂನು ವಿಭಾಗದ ಈ ಕೆಳಗೆ ಸಹಿ ಮಾಡಿರುವ ಸದಸ್ಯರು ಹಾಗೂ ವೃತ್ತಿನಿರತ ವಕೀಲರು, ಈ ವಿದ್ಯಾರ್ಥಿನಿಯ ಸುಕ್ಷೇಮದ ಬಗ್ಗೆ ಆತಂಕಿತರಾಗಿದ್ದೇವೆ. ಮತ್ತೊಂದು ಉನ್ನಾವೊ ಪ್ರಕರಣ ಸಂಭವಿಸಲು ಸಮಾಜವಾಗಿ ನಾವು ಅವಕಾಶ ನೀಡಬಾರದು. ಆದ್ದರಿಂದ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು" ಎಂದು ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News