ನನಗೆ ವಾಟ್ಸ್ಯಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಬಯ್ಯಬೇಡಿ, ನನ್ನಲ್ಲಿರುವುದು ಲಾಟ್‌ಪೋಟ್ ಮೊಬೈಲ್: ನಳಿನ್

Update: 2019-08-29 11:01 GMT

ಮಂಗಳೂರು, ಆ.29: ಕೆಲವರಿಗೆ ಹೋರಾಟ ಮಾಡಿದರೆ ಸೀಟು ಸಿಗುತ್ತದೆ ಎಂಬ ಭಾವನೆ ಇದೆ. ಆದರೆ ಬಿಜೆಪಿಯಲ್ಲಿ ಸೀಟು ಸಿಗುವುದು ಹೋರಾಟದಿಂದಲ್ಲ. ಕೆಲಸ ಮಾಡಿದರೆ ಮಾತ್ರ ಸಿಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಇಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಶಾಸಕ ಅಂಗಾರ ಅವರನ್ನು ಉಲ್ಲೇಖಿಸಿ ಮಾತನಾಡಿದ ನಳಿನ್ ಕುಮಾರ್, ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರು ಅಹಂಕಾರ ತೋರಿಲ್ಲ. ಗುಂಪುಗಾರಿಕೆ ಮಾಡಿಲ್ಲ. ಯಾರ ಮನೆ ಬಾಗಿಲಿಗೂ ಸೀಟಿಗಾಗಿ ಅಲೆದಾಡಿಲ್ಲ. ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನವನ್ನು ಬಯಸಿಲ್ಲ. ಶೈಕ್ಷಣಿಕವಾಗಿ ನಾನು ಯಾವುದೇ ವಿವಿ ಪದವಿಯನ್ನು ಪಡೆಯದಿದ್ದರೂ, ಸಂಘದ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡು ಸಮಾಜದ ಅಧ್ಯಯನಕ್ಕಾಗಿ ನನಗೆ ನೀಡಿದ ಡಾಕ್ಟರೇಟ್ ಪದವಿ ಇದು ಎಂದು ತಿಳಿದಿದ್ದೇನೆ ಎಂದರು.

ಜಿಲ್ಲೆಯ ಜನತೆಯ ಪಾಲಿಗೆ ನಾನು ಎಂದೂ ಸಾಮಾನ್ಯ ಕಾರ್ಯಕರ್ತ. ಪಕ್ಷದಲ್ಲಿ ನಾನೆಷ್ಟೇ ಎತ್ತರಕ್ಕೆ ಏರಿದ್ದರೂ ನಾನೊಬ್ಬ ಸ್ವಯಂ ಸೇವಕ. ಜನಪ್ರತಿನಿಧಿಯಾಗಿ ಮತದಾರರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ರಾಜಕಾರಣ ಮಾಡಿದ್ದೇನೆ. ಇದೀಗ ಪಕ್ಷದ ರಾಜ್ಯಾಧ್ಯಕ್ಷನಾಗಿಯೂ ದ.ಕ. ಜಿಲ್ಲೆ ಏನು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಡಲು ಅವಕಾಶ ನೀಡಬೇಕೆಂದು ಅವರು ಸಭೆಯಲ್ಲಿದ್ದ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.

ನನಗೆ ಈಗ ದೊರಕಿರುವುದು ಜವಾಬ್ಧಾರಿ. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬೆಳೆದಿರುವಂತೆ ರಾಜ್ಯದೆಲ್ಲೆಡೆ ಬಿಜೆಪಿಯನ್ನು ಮತಗಟ್ಟೆಗೆ ಕೊಂಡೊಯ್ಯುವ ಜವಾಬ್ಧಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದ ನಳಿನ್, ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದುಕೊಂಡು, ಸಂಯಮದೊಂದಿಗೆ ಸಮಯ ಪಾಲನೆಯಲ್ಲಿ ರಾಜಿ ಇಲ್ಲದೆ ಕೆಲಸ ನಿರ್ವಹಿಸುತ್ತೇನೆ. ಕಾರ್ಯಕರ್ತರ ಗಣದೊಂದಿಗೆ ನಾನು ಜಿಲ್ಲೆಯ ಗೌರವವನ್ನು ರಾಜ್ಯಾಧ್ಯಕ್ಷಾಗಿ ಉಳಿಸುತ್ತೇನೆ ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಆರು ದಿನಗಳ ಪ್ರವಾಸ ಮಾಡಿ, ಒಂದು ದಿನದ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ. ಹಾಗಾಗಿ ಕೋಲ, ನೇಮ, ಸಮಾರಂಭಗಳಿಗೆ ಕರೆದಾಗ ಬರಲಾಗದಿದ್ದರೆ ಬೇಸರಿಸಬೇಡಿ. ಜಿಲ್ಲೆಯ ಶಾಸಕರಿಂದ ಸಂಸದರೆಂದು ತಿಳಿದು ಕೆಲಸ ಕಾರ್ಯವನ್ನು ಮಾಡಿಸಿ. ನನ್ನ ತಪ್ಪಿದ್ದಾಗ ನನ್ನ ಕೊಠಡಿಗೆ ಬಂದು ನನ್ನಲ್ಲಿ ಮಾತನಾಡಿ, ಅದು ಬಿಟ್ಟು ದಾರಿಯಲ್ಲಿ, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಬಯ್ಯಬೇಡಿ. ನನ್ನಲ್ಲಿ ಅದು ಯಾವುದೂ ಇಲ್ಲ. ನನ್ನಲ್ಲಿರುವುದು ಲಾಟ್‌ಪೋಟ್ ಮೊಬೈಲ್ ಎಂದು ನಳಿನ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶಾಸಕ ಅಂಗಾರ, ರುಕ್ಮಯ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಳಿನ್ ಕುಮಾರ್‌ರವನ್ನು ಅಭಿನಂದಿಸಿ ಮಾತನಾಡಿದರು.

ಅಭಿನಂದನೆ ಸ್ವೀಕರಿಸುವ ಮೊದಲು ತನ್ನ ಸಂಘಟನಾ ಗುರು ಬಿ.ಕೆ. ರಮೇಶ್‌ರವರ ಕಾಲಿಗೆ ನಮಸ್ಕರಿಸಿದ ನಳಿನ್ ಕುಮಾರ್, ಬಳಿಕ ಅವರನ್ನು ವೇದಿಕೆಯಲ್ಲಿ ಅಭಿನಂದಿಸಿದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಹಿರಿಯ ನಾಯಕರಾದ ಯೋಗೀಶ್ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್, ಪ್ರಭಾಕರ ಬಂಗೇರ, ಸುದರ್ಶನ್, ಉದಯ ಕುಮಾರ್ ಶೆಟ್ಟಿ, ಮಲ್ಲಿಕಾ ಪ್ರಸಾದ್, ಜಯರಾಂ ಶೆಟ್ಟಿ, ಕಿಶೋರ್ ರೈ, ಬೃಜೇಶ್ ಚೌಟ, ಪದ್ಮನಾಭ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲೆಯ ಋಣ ಇದೆ
ನಾನು ಯಾವತ್ತೂ ಯಾವುದೇ ಸ್ಥಾನಮಾನವನ್ನು ಬಯಸಿಲ್ಲ. ಸಂಘಟನೆಯ ಹಿರಿಯ ಸೂಚನೆಯ ಮೇರೆಗೆ ನಾನು ರಾಜಕೀಯ ಪ್ರವೇಶಿಸಿ ಲೋಕಸಭೆಗೆ ಸ್ಪರ್ಧಿಸಿದ್ದೆ. ಆಗ ಈ ನಳಿನ್ ಕುಮಾರ್ ಯಾರೆಂದು ಯಾರಿಗೂ ತಿಳಿದಿರಲಿಲ್ಲ. ನನ್ನ ವಿರುದ್ಧವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಕೂಡಾ ‘ಯಾರವ ನಳಿನ್ ಕುಮಾರ್’ ಎಂದು ಕೇಳಿದ್ದರು. ಜನತೆ ನನ್ನನ್ನು ಸ್ವೀಕರಿಸಿ ಪ್ರೀತಿಸಿದರು. ಹಾಗಾಗಿ ಮತದಾರರು ಹಾಗೂ ಕಾರ್ಯಕರ್ತರನ್ನು ಮರೆಯಲಾರೆ. ಜಿಲ್ಲೆಯ ಋಣ ಇದೆ ಎಂದು ನಳಿನ್ ಕುಮಾರ್ ಹೇಳಿದರು.

ಅಧಿಕಾರದ ಹಿಂದೆ ಬಿದ್ದಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಅಂಗಾರ, ನಾನು ಅಧಿಕಾರದ ಹಿಂದೆ ಬಿದ್ದಿಲ್ಲ. ಸಂಘಟನೆ ವಿಚಾರಧಾರೆಯಡಿ ನಾನು ಬಂದಿದ್ದು, ನನ್ನ ಬಗ್ಗೆ ಸಂಶಯ ಬೇಡ. ಪಕ್ಷ ಸಂಘಟನೆಯಲ್ಲಿ ನಳಿನ್ ಕುಮಾರ್ ಜತೆಗಿದ್ದು, ಸಹಕಾರ ನೀಡಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News