ಜಸ್ಟಿಸ್ ಖುರೇಷಿ ಪದೋನ್ನತಿ ಕುರಿತ ಸುಪ್ರೀಂ ಕೋರ್ಟ್ ಶಿಫಾರಸನ್ನು ವಾಪಸ್ ಕಳುಹಿಸಿದ ಕೇಂದ್ರ ಸರಕಾರ
Update: 2019-08-29 16:04 IST
ನವದೆಹಲಿ: ಜಸ್ಟಿಸ್ ಅಕಿಲ್ ಖುರೇಶಿ ಅವರನ್ನು ಮಧ್ಯ ಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಪದೋನ್ನತಿಗೊಳಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸನ್ನು ಕೇಂದ್ರ ಸರಕಾರ ವಾಪಸ್ ಕಳುಹಿಸಿದೆ.
ಕೊಲೀಜಿಯಂಗೆ ಪತ್ರ ಬರೆದಿರುವ ಕೇಂದ್ರ, ಜಸ್ಟಿಸ್ ಖುರೇಶಿ ಅವರ ನೇಮಕಾತಿ ಶಿಫಾರಸಿನಲ್ಲಿ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದೆ. ಖುರೇಶಿ ಅವರನ್ನು ಬೇರೆ ಯಾವುದಾದರೂ ಹೈಕೋರ್ಟಿಗೆ ಪರಿಗಣಿಸಬಹುದೆಂದು ಕೇಂದ್ರ ಸಿಜೆಐಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಕೇಂದ್ರದ ಪತ್ರವನ್ನು ಕೊಲೀಜಿಯಂ ಮುಂದಿಟ್ಟು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.
ಜಸ್ಟಿಸ್ ಖುರೇಶಿ ಅವರು 2010ರಲ್ಲಿ ಈಗಿನ ಗೃಹ ಸಚಿವ ಅಮಿತ್ ಶಾ ಅವರನ್ನು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.