‘ಹೊಸ ಭಾರತಕ್ಕೆ ಸ್ವಾಗತ’: ‘ವಾರ್ ಆ್ಯಂಡ್ ಪೀಸ್’ ಬಗ್ಗೆ ಕೋರ್ಟ್ ಪ್ರಶ್ನೆಗೆ ಜೈರಾಮ್ ರಮೇಶ್ ಪ್ರತಿಕ್ರಿಯೆ

Update: 2019-08-29 16:52 GMT

ಹೊಸದಿಲ್ಲಿ, ಆ. 29: ಲಿಯೋ ಟಾಲ್‌ಸ್ಟಾಯ್‌ಯ ‘ವಾರ್ ಆ್ಯಂಡ್ ಪೀಸ್’ನಂತಹ ‘ಆಕ್ಷೇಪಾರ್ಹ ಸಾಮಗ್ರಿ’ಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಔಚಿತ್ಯ ಏನು ಎಂದು ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ಪ್ರಶ್ನಿಸಿದ ಬಳಿಕ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದನ್ನು ವಿಲಕ್ಷಣ ಘಟನೆ ಎಂದು ವ್ಯಾಖ್ಯಾನಿಸಿದ್ದಾರೆ.

ಪತ್ತೆಯಾದ ಪುಸ್ತಕ ‘ವಾರ್ ಆ್ಯಂಡ್ ಪೀಸ್’ ಎಂದು ಮಾಧ್ಯಮಗಳ ವರದಿ ಮಾಡಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅನಂತರ ಈ ಪುಸ್ತಕ ‘ವಾರ್ ಆ್ಯಂಡ್ ಪೀಸ್ ಇನ್ ಜಂಗಲ್ ಮಹಲ್’ ಎಂದು ವರದಿಯಾಗಿದೆ.

ನಿಜವಾದ ಕ್ಲಾಸಿಕ್ ಪುಸ್ತಕವಾಗಿರುವ ‘ವಾರ್ ಆ್ಯಂಡ್ ಪೀಸ್’ ಅನ್ನು ಮನೆಯಲ್ಲಿ ಇಟ್ಟುಕೊಳ್ಳುವ ಔಚಿತ್ಯ ಏನು ಎಂದು ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಶ್ನಿಸುವುದು ವಿಚಿತ್ರವಾಗಿದೆ. ಮಹಾತ್ಮಾ ಗಾಂಧಿ ಅವರ ಮೇಲೆ ಟಾಲ್‌ಸ್ಟಾಯ್ ಪ್ರೇರಣೆ ಆಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಜೈರಾಮ್ ರಮೇಶ್ ಗುರುವಾರ ಟ್ವೀಟ್ ಮಾಡಿದ್ದಾರೆ.

ನವ ಭಾರತಕ್ಕೆ ಸ್ವಾಗತ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

 ಜೈರಾಮ್ ರಮೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಯೂತ್ ವಿಂಗ್, ಈ ಘಟನೆ ವಿಚಿತ್ರವಾಗಿದೆ. ಭಾರತದ ಸಾವಿರಾರು ಸಾಹಿತ್ಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಓದುಗರು, ಬರಹಗಾರರನ್ನು ಬಾಂಬೆ ಉಚ್ಚ ನ್ಯಾಯಾಲಯ ಏನು ಮಾಡಲು ಹೊರಟಿದೆ ಎಂಬ ಬಗ್ಗೆ ಅಚ್ಚರಿ ಉಂಟಾಗಿದೆ ಎಂದಿದೆ.

‘ನಗರ ನಕ್ಸಲ್’ ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸಿದ ಬಾಂಬೆ ಉಚ್ಚ ನ್ಯಾಯಾಲಯ, ಆರೋಪಿ ಮನೆಯಲ್ಲಿ ಲಿಯೋ ಟಾಲ್ ಸ್ಟಾಯ್ ಅವರ ‘ವಾರ್ ಆ್ಯಂಡ್ ಪೀಸ್’ ಪುಸ್ತಕ ಇಟ್ಟುಕೊಳ್ಳುವ ಔಚಿತ್ಯ ಏನು ಎಂದು ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News