370 ವಿಧಿ ರದ್ದುಗೊಳಿಸಿದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಪ್ರಜ್ಞಾ ಸಿಂಗ್

Update: 2019-08-30 16:30 GMT

ಇಂದೋರ್, ಆ. 30: ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿ 370ನ್ನು ರದ್ದುಗೊಳಿಸಿದ ರೀತಿಯಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಶುಕ್ರವಾರ ಹೇಳಿದ್ದಾರೆ.

‘‘ಜಮ್ಮು ಹಾಗೂ ಕಾಶ್ಮೀರಕ್ಕೆವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370ನ್ನು ರದ್ದುಗೊಳಿಸಿದ ರೀತಿಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು’’ ಎಂದು ಅವರು ತಿಳಿಸಿದ್ದಾರೆ.

ವಿಧಿ 370ನ್ನು ರದ್ದುಗೊಳಿಸಿರುವುದರಿಂದ ದೇಶ ಒಗ್ಗಟ್ಟಾಗಿದೆ ಎಂದು ಪ್ರತಿಯೊಬ್ಬರ ಭಾವನೆ. ಇನ್ನು ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುವುದು. ಇದಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

 ಇತ್ತೀಚೆಗೆ ಉತ್ತರಪ್ರದೇಶದ ಸಚಿವ ಸುನೀಲ್ ಭರಾಲಾ ಇದೇ ರೀತಿಯ ಹೇಳಿಕೆ ನೀಡಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಅಧಿಕಾರ ಅವಧಿಯಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದರು.

‘‘ಅಯೋಧ್ಯೆ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ದಿನನಿತ್ಯ ವಿಚಾರಣೆ ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಅನುಕೂಲವಾಗಿ ಶೀಘ್ರವಾಗಿ ತೀರ್ಪು ಹೊರಬೀಳಲಿದೆ. ಮುಸ್ಲಿಂ ಸಮುದಾಯ ಕೂಡ ಇದಕ್ಕೆ ಬೆಂಬಲ ನೀಡಲಿದ್ದಾರೆ’’ ಎಂದು ಭರಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News