ಫ್ಲೋರಿಡದತ್ತ ಧಾವಿಸುತ್ತಿರುವ ‘ಡೋರಿಯನ್’ ಚಂಡಮಾರುತ: ಪೋಲ್ಯಾಂಡ್ ಪ್ರವಾಸ ರದ್ದುಗೊಳಿಸಿದ ಟ್ರಂಪ್

Update: 2019-08-30 16:10 GMT

ವಾಶಿಂಗ್ಟನ್, ಆ. 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹಠಾತ್ತನೆ ತನ್ನ ಪೋಲ್ಯಾಂಡ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಹಾಗೂ ನಾನು ದೇಶದಲ್ಲೇ ಇದ್ದು ಫ್ಲೋರಿಡದತ್ತ ಧಾವಿಸುತ್ತಿರುವ ‘ಡೋರಿಯನ್’ ಚಂಡಮಾರುತವನ್ನು ಎದುರಿಸುವ ಸಿದ್ಧತೆಗಳ ಉಸ್ತುವಾರಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ನಡೆದ ಜಿ7 ಗುಂಪಿನ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿ, ಸೋಮವಾರ ಶ್ವೇತಭವನಕ್ಕೆ ಮರಳಿರುವ ಟ್ರಂಪ್, ನನ್ನ ಬದಲಿಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಪೋಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

‘‘ಚಂಡಮಾರುತವು ಅತ್ಯಂತ ಭೀಕರವಾಗಬಹುದು ಎಂಬ ಸೂಚನೆಗಳು ಲಭಿಸಿವೆ’’ ಎಂದು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಚಂಡಮಾರುತವು ಧಾವಿಸುತ್ತಿರುವ ದಾರಿಯು ಫ್ಲೋರಿಡಕ್ಕೆ ಅಪ್ಪಳಿಸುವ ರೀತಿಯಲ್ಲಿದೆ. ಅಟ್ಲಾಂಟಿಕ್ ಕರಾವಳಿಯ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಒಡೆತನದ ಮಾರ್-ಎ-ಲಾಗೊ ಕ್ಲಬ್ ಕೂಡ ಚಂಡಮಾರುತದ ದಾರಿಯಲ್ಲಿರುವಂತೆ ಅನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News