ಬ್ರೆಕ್ಸಿಟ್ ತಡೆದರೆ ಶಾಶ್ವತ ಹಾನಿ: ಬ್ರಿಟನ್ ಪ್ರಧಾನಿ ಎಚ್ಚರಿಕೆ

Update: 2019-08-30 16:40 GMT

ಲಂಡನ್, ಆ. 30: ಬ್ರೆಕ್ಸಿಟನ್ನು ತಡೆಯಲು ಅಥವಾ ಅದನ್ನು ಅಕ್ಟೋಬರ್ 31ರ ಆಚೆಗೂ ಮುಂದೂಡಲು ಮುಂದಿನ ವಾರ ಸಂಸದರು ಪ್ರಯತ್ನ ನಡೆಸಿದರೆ, ಅವರು ರಾಜಕೀಯದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಗೆ ‘ಶಾಶ್ವತ ಹಾನಿ’ಯುಂಟು ಮಾಡುತ್ತಾರೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಶುಕ್ರವಾರ ಎಚ್ಚರಿಸಿದ್ದಾರೆ.

2016ರಲ್ಲಿ ನಡೆದ ಜನಮತಗಣನೆಯಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಜೆಗಳು ನಿರ್ಧರಿಸಿದ್ದಾರೆ ಹಾಗೂ ಆ ನಿರ್ಧಾರವನ್ನು ಎತ್ತಿಹಿಡಿಯಲು ಸಂಸದರು ಹಲವು ಬಾರಿ ಭರವಸೆ ನೀಡಿದ್ದಾರೆ ಎಂದು ‘ಸ್ಕೈ ನ್ಯೂಸ್’ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಜಾನ್ಸನ್ ಹೇಳಿದರು.

ಒಪ್ಪಂದರಹಿತ ಬ್ರೆಕ್ಸಿಟ್ ಸಂಭವಿಸಿದರೆ ಅದನ್ನು ತಡೆಯಲು ನಿರ್ಣಯ ಮಂಡಿಸುವುದಾಗಿ ಪ್ರತಿಪಕ್ಷ ಸಂಸದರು ಹಾಗೂ ಜಾನ್ಸನ್‌ರದೇ ಕನ್ಸರ್ವೇಟಿವ್ ಪಕ್ಷದ ಕೆಲವು ಸಂಸದರು ಹೇಳಿದ್ದಾರೆ.

ಒಪ್ಪಂದ ರಹಿತ ಬ್ರೆಕ್ಸಿಟ್ ಸಂಭವಿಸಿದರೆ ಆಹಾರ, ಇಂಧನ ಮತ್ತು ವೈದ್ಯಕೀಯ ಸಾಮಗ್ರಿಗಳ ಕೊರತೆ ಕಾಣಿಸಿಕೊಳ್ಳಬಹುದು ಎಂದು ಸ್ವತಃ ಸರಕಾರದ ವಿಶ್ಲೇಷಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News