ಕಾರ್ಗಿಲ್ ಹೀರೋ ಮುಹಮ್ಮದ್ ಸನಾವುಲ್ಲಾ, ಮಕ್ಕಳ ಹೆಸರು ಎನ್‍ಆರ್ ಸಿ ಪಟ್ಟಿಯಲ್ಲಿಲ್ಲ

Update: 2019-08-31 08:38 GMT

ಗುವಾಹತಿ, ಆ.31: ವಿದೇಶೀಯರ ಟ್ರಿಬ್ಯುನಲ್‍ ನಿಂದ ಇತ್ತೀಚೆಗೆ ವಿದೇಶಿಗ ಎಂದು ಘೋಷಿಸಲ್ಪಟ್ಟು ದಿಗ್ಬಂಧನ ಶಿಬಿರಕ್ಕೆ ಕಳುಹಿಸಲ್ಪಟ್ಟಿದ್ದ  ಭಾರತೀಯ ಸೇನೆಯ ನಿವೃತ್ತ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿದ್ದ  ಮುಹಮ್ಮದ್ ಸನಾವುಲ್ಲಾ ಅವರ ಹೆಸರು ಇಂದು ಬಿಡುಗಡೆಗೊಂಡ ಅಂತಿಮ ಎನ್‍ಆರ್ ಸಿ ಪಟ್ಟಿಯಲ್ಲಿಲ್ಲ.

ಸನಾವುಲ್ಲಾ ಅವರ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನ ಹೆಸರು ಕೂಡ ಪಟ್ಟಿಯಲ್ಲಿಲ್ಲ. ಆದರೆ ಸನಾವುಲ್ಲಾ ಅವರ ಪತ್ನಿಯ ಹೆಸರು ಪಟ್ಟಿಯಲ್ಲಿದೆ.

ಮುಹಮ್ಮದ್ ಸನಾವುಲ್ಲಾ ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರಲ್ಲದೆ, ರಾಷ್ಟ್ರಪತಿಗಳ ಪದಕ ವಿಜೇತರೂ ಆಗಿದ್ದಾರೆ. ಅವರ ಹೆಸರು  `ಡಿ' (ಶಂಕಿತ) ಮತದಾರರ ಪಟ್ಟಿಯಲ್ಲಿ  ಸೇರ್ಪಡೆಯಾಗಿದ್ದರಿಂದ ಅವರ ವಿರುದ್ಧ 2008ರಲ್ಲಿ ದಾಖಲಾದ ಪ್ರಕರಣದ ಆಧಾರದಲ್ಲಿ ವಿದೇಶೀಯರ ಟ್ರಿಬ್ಯುನಲ್ ಅವರನ್ನು  ವಿದೇಶಿಗ ಎಂದು ಘೋಷಿಸಿ ಮೇ ತಿಂಗಳಲ್ಲಿ ದಿಗ್ಬಂಧನ ಶಿಬಿರಕ್ಕೆ ಅವರನ್ನು ಕಳುಹಿಸಲಾಗಿತ್ತು.  ಗುವಾಹತಿ ಹೈಕೋರ್ಟ್ ಅವರಿಗೆ ನಂತರ ಜಾಮೀನು ನೀಡಿತ್ತಾದರೂ ಅವರ ವಿರುದ್ಧ ವಿಚಾರಣೆ ಮುಂದುವರಿಯುವುದು ಎಂದು ಹೇಳಿತ್ತು.

ವಿದೇಶೀಯರ ಟ್ರಿಬ್ಯುನಲ್ ನಿಂದ ವಿದೇಶಿಗ ಎಂದು ಗುರುತಿಸಲ್ಪಟ್ಟವರು ಹಾಗೂ ಅವರ ಮಕ್ಕಳು ಎನ್‍ಆರ್‍ ಸಿ ಪಟ್ಟಿಯಲ್ಲಿರಲು ಸಾಧ್ಯವಿಲ್ಲ ಎಂಬ ಎನ್‍ಆರ್ ಸಿ ನಿಯಮದಂತೆ ಅವರ ಹೆಸರು ಪಟ್ಟಿಯಲ್ಲಿಲ್ಲ. 52 ವರ್ಷದ ಸನಾವುಲ್ಲಾ ಸೇನೆಯನ್ನು 1987ರಲ್ಲಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News