ಹಿಂದೂಗಳನ್ನು ಹೊರಗಿಡುವ ಸಂಚು: ಪೌರತ್ವ ಪಟ್ಟಿ ವಿರುದ್ಧ ಅಸ್ಸಾಂ ಬಿಜೆಪಿಗರ ಆಕ್ರೋಶ

Update: 2019-08-31 16:55 GMT

ಗುವಾಹಟಿ, ಆ.31: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಅಂತಿಮ ಪಟ್ಟಿಯ ಬಗ್ಗೆ ಅಸ್ಸಾಂನ ಆಡಳಿತಾರೂಢ ಬಿಜೆಪಿ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು , ಪಟ್ಟಿಯಲ್ಲಿ ಹಲವು ನೈಜ ಪೌರರ, ಅದರಲ್ಲೂ ಪ್ರಮುಖವಾಗಿ 1971ಕ್ಕೂ ಮುನ್ನ ಬಾಂಗ್ಲಾದೇಶದಿಂದ ಬಂದಿರುವ ವಲಸಿಗರನ್ನು ಕೈಡಲಾಗಿದೆ ಎಂದಿದ್ದಾರೆ.

1971ಕ್ಕೂ ಮುನ್ನ ಬಾಂಗ್ಲಾದಿಂದ ಬಂದಿರುವ ವಲಸಿಗರು ಸಲ್ಲಿಸಿರುವ ವಲಸಿಗರ ಪ್ರಮಾಣಪತ್ರವನ್ನು ಮಾನ್ಯ ಮಾಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅಲ್ಲದೆ ಪರಂಪರೆ ಪಟ್ಟಿಯನ್ನು ತಿರುಚುವ ಮೂಲಕ ಹಲವರ ಹೆಸರನ್ನು ಸೇರಿಸಲಾಗಿದೆ ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಈ ಮಧ್ಯೆ ಬಿಜೆಪಿಯ ‘ಉರಿನಾಲಗೆಯ ಶಾಸಕ’ ಎಂದೇ ಹೆಸರಾಗಿರುವ ಶಿಲಾದಿತ್ಯ ದೇವ್, ಈ ಪಟ್ಟಿ ಮುಸ್ಲಿಮರಿಗೆ ನೆರವಾಗುವ ಮತ್ತು ಹಿಂದುಗಳನ್ನು ಹೊರಹಾಕುವ ಷಡ್ಯಂತ್ರವಾಗಿದೆ. ಖಾಸಗಿ ಸಂಸ್ಥೆ ನಿರ್ಮಿಸಿರುವ ಎನ್‌ಆರ್‌ಸಿ ಸಾಫ್ಟ್‌ವೇರ್‌ನಲ್ಲಿ ಹಸ್ತಕ್ಷೇಪ ನಡೆಸಲಾಗಿದ್ದು, ಪೌರತ್ವ ನೋಂದಣಿ ಪಟ್ಟಿ ರಚಿಸುವ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಟೀಕಿಸಿದ್ದಾರೆ.

ತಮ್ಮ ಹಕ್ಕುಗಳ ರಕ್ಷಣೆಗಾಗಿ ದೋಷರಹಿತ ಎನ್‌ಆರ್‌ಸಿಯನ್ನು ಜನತೆ ಬಯಸಿದ್ದರು ಆದರೆ ಅದು ಸಾಧ್ಯವಾಗಿಲ್ಲ. ಹಿಂದುಗಳನ್ನು ಹೊರದೂಡಿ ಮುಸ್ಲಿಮ್ ನುಸುಳುಕೋರರಿಗೆ ನ್ಯಾಯಸಮ್ಮತತೆ ಒದಗಿಸುವ ಷಡ್ಯ್ರಂತ್ರವಿದು. ಅಸ್ಸಾಂ ಒಪ್ಪಂದ ಏರ್ಪಟ್ಟ ಸಂದರ್ಭ ಒಂದು ಕೋಟಿಗೂ ಹೆಚ್ಚು ಬಾಂಗ್ಲಾದೇಶಿಗಳು ಇದ್ದಾರೆ ಎಂದು ಅಂದಾಜು ಮಾಡಲಾಗಿತ್ತು.

ಈಗ ಅವರೆಲ್ಲಿ ಹೋದರು ಎಂದು ದೇವ್ ಪ್ರಶ್ನಿಸಿದ್ದಾರೆ. ಈಗ ಬಿಜೆಪಿ ಪೌರತ್ವ ಮಸೂದೆಯ ಮೂಲಕ ಹಿಂದುಗಳನ್ನು ರಕ್ಷಿಸಬೇಕಿದೆ. ಶೀಘ್ರದಲ್ಲೇ ಮಸೂದೆ ಜಾರಿಯಾಗಲಿದೆ ಎಂದು ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News