ಈ.ಡಿ ಮುಂದೆ ಹಾಜರಾದ ಡಿ.ಕೆ ಶಿವಕುಮಾರ್

Update: 2019-08-31 16:21 GMT

ಹೊಸದಿಲ್ಲಿ,ಆ.31: ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ ಶಿವಕುಮಾರ್ ಅವರು ನಿರಂತರ ಎರಡನೇ ದಿನವಾದ ಶನಿವಾರವೂ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು. ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಕರ್ನಾಟಕದ ಮಾಜಿ ಸಚಿವನನ್ನು ಶುಕ್ರವಾರ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ವಿಚಾರಣೆಗೊಳಪಡಿಸಿದ್ದ ತನಿಖಾಧಿಕಾರಿಗಳು ಅವರ ಹೇಳಿಕೆಗಳನ್ನು ದಾಖಲಿಸಿದ್ದರು.

ಶನಿವಾರವೂ ಡಿಕೆಶಿಗೆ ತನಿಖಾಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೊಸದಿಲ್ಲಿಗೆ ಆಗಮನಕ್ಕೂ ಮೊದಲೇ ತಿಳಿಸಿದ್ದ ಡಿಕೆಶಿ, “ಅದು ನನ್ನ ಕರ್ತವ್ಯ. ನಾನು ಕಾನೂನನ್ನು ಗೌರವಿಸಲೇಬೇಕು. ನಾವು ಕಾನೂನು ರಚನೆಕಾರರು ಮತ್ತು ಕಾನೂನು ಪಾಲಕರು. ಈ.ಡಿ ನನಗೆ ಸಮನ್ಸ್ ನೀಡಿದೆ. ಅವರು ನನ್ನನ್ನು ಹಣ ವಂಚನೆ ತಡೆ ಕಾಯ್ದೆಯಡಿ ಯಾಕೆ ಕರೆದಿದ್ದಾರೆ ಎಂದು ತಿಳಿಯಲಿಲ್ಲ” ಎಂದು ಶಿವಕುಮಾರ್ ತಿಳಿಸಿದ್ದಾರೆ.

ಈ.ಡಿ ಸಮನ್ಸ್ ವಿರುದ್ಧ ಶಿವಕುಮಾರ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಅವರು ತನಿಖಾಸಂಸ್ಥೆಯ ಮುಂದೆ ಹಾಜರಾಗಿದ್ದರು. ಕೇಂದ್ರ ತನಿಖಾ ತಂಡ ಹಣ ವಂಚನೆ ಪ್ರಕರಣದಲ್ಲಿ ಶಿವಕುಮಾರ್, ಹೊಸದಿಲ್ಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಹಾಗೂ ಇತರರ ವಿರುದ್ಧ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ದೂರು ದಾಖಲಿಸಿತ್ತು.

2017ರ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕರು ಕರ್ನಾಟಕದ ರೆಸಾರ್ಟ್‌ನಲ್ಲಿ ತಂಗಲು ಅನುಕೂಲ ಮಾಡಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರಣ ನನ್ನ ವಿರುದ್ಧ ಐಟಿ ದಾಳಿ ಅಸ್ತ್ರ ಬಳಸಲಾಗಿದೆ ಎಂದು ಶಿವಕುಮಾರ್ ಶುಕ್ರವಾರ ಬೆಂಗಳೂರಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News