ಬಾಬರಿ ಮಸೀದಿ ದ್ವಂಸ-ಆಪರೇಶನ್ ಬ್ಲೂಸ್ಟಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸುಖ್ ಬೀರ್ ಬಾದಲ್

Update: 2019-08-31 17:27 GMT

ಚಂಡೀಗಢ, ಆ.31: ಬಾಬ್ರಿ ಮಸೀದಿ ಧ್ವಂಸ ಹಾಗೂ 1984ರ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ಬಗ್ಗೆ ಬಿಜೆಪಿಯ ಮಿತ್ರಪಕ್ಷ ಅಕಾಲಿ ದಳದ ಮುಖಂಡ , ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಸುಖ್‌ಬೀರ್ ಬಾದಲ್ ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.

ಶುಕ್ರವಾರ ಅಮೃತಸರದ ಸ್ವರ್ಣಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಿಖ್ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಬಾದಲ್, “ಕಾಂಗ್ರೆಸ್ ಪಕ್ಷ ಸ್ವರ್ಣ ಮಂದಿರದ ಮೇಲೆ ಟ್ಯಾಂಕ್‌ಗಳನ್ನು ಬಳಸಿ ದಾಳಿ ನಡೆಸಿದ್ದರೂ ನಮ್ಮ ಜನರು ಇನ್ನೂ ಅವರಿಗೇ ವೋಟು ಹಾಕುತ್ತಿದ್ದಾರೆ. ಇನ್ನೊಂದೆಡೆ, ಬಾಬ್ರಿ ಮಸೀದಿಯ ವಿಷಯವನ್ನು ಗಮನಿಸಿ. ಬಿಜೆಪಿ ಧ್ವಂಸ ಮಾಡಿತು ಎಂದು ಹೇಳಲಾಗುತ್ತಿದೆ. ನಾನು ಈ ಮಾತನ್ನು ಹೇಳಲು ಬಯಸುವುದಿಲ್ಲ, ಒಬ್ಬರಾದರೂ ಮುಸ್ಲಿಮರು ಬಿಜೆಪಿಗೆ ಮತ ಹಾಕಿದ್ದಾರೆಯೇ” ಎಂದು ಹೇಳಿದ್ದರು. ಸಿಖ್ಖರ್ ಒಗ್ಗಟ್ಟಿನಿಂದ ಇರಬೇಕು ಎಂಬ ಅರ್ಥದಲ್ಲಿ ಅವರು ಈ ಮಾತು ಆಡಿದ್ದಾರೆ ಎನ್ನಲಾಗಿದೆ.

ಸುಖ್‌ಬೀರ್ ಪಂಜಾಬ್‌ನ ಸಂಸದರಾಗಿದ್ದಾರೆ. ನಾಯಕರಿಲ್ಲದ ಇತರ ಸಮುದಾಯದ ಹೆಸರನ್ನು ಉಲ್ಲೇಖಿಸಲು ನಾನು ಬಯಸುವುದಿಲ್ಲ. ಆದರೆ ಒಂದು ಉದಾಹರಣೆ ಗಮನಿಸಿ, ಸಿಖ್ ಡ್ರೈವರ್ ಮೇಲೆ ಒಬ್ಬ ಅಧಿಕಾರಿ ಹಲ್ಲೆ ನಡೆಸಿದ. ನಾವೆಲ್ಲಾ ಒಗ್ಗಟ್ಟಿನಿಂದ ಇರುವ ಕಾರಣ ಹಲ್ಲೆ ಮಾಡಿದಾತ ಕೆಲಸ ಕಳೆದುಕೊಳ್ಳಬೇಕಾಯಿತು. ಇದೇ ರೀತಿ, ಹಲವು ಧರ್ಮದ ಅನುಯಾಯಿಗಳ ಮೇಲೆ ಪ್ರತೀ ದಿನ ಹಲ್ಲೆ ನಡೆಯುತ್ತಿದ್ದರೂ ಯಾರೊಬ್ಬರೂ ಈ ಬಗ್ಗೆ ಗಮನವೇ ನೀಡುತ್ತಿಲ್ಲ ಎಂದು ಸುಖ್‌ಬೀರ್ ಬಾದಲ್ ಹೇಳಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.ಹಲವು ದಶಕಗಳಿಂದ ಸಿಖ್ ಧರ್ಮ ಮತ್ತು ಒಕ್ಕೂಟ ವ್ಯವಸ್ಥೆ ಅಕಾಲಿದಳದ ರಾಜಕೀಯದ ಮೂಲಮಂತ್ರವಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಅಕಾಲಿ ದಳ ಬೆಂಬಲಿಸಿರುವುದಕ್ಕೆ ಪಂಜಾಬ್ ರಾಜ್ಯದಲ್ಲಿ ತೀವ್ರ ಟೀಕೆ ಎದುರಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News