ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಮುಚ್ಚಿಹಾಕಿದ ಆರೋಪ: ಶಾಲಾ ಪ್ರಾಂಶುಪಾಲನ ಬಂಧನ

Update: 2019-08-31 17:30 GMT

ರಾಯ್‌ಪುರ, ಆ.31: ಒಂದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ ಘಟನೆ ಛತ್ತೀಸ್‌ಗಢದ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದಿದ್ದು, ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಆಗಸ್ಟ್ 20ರಂದು ಘಟನೆ ನಡೆದಿದೆ. ಶಾಲೆಯ ಶೌಚಾಲಯದಲ್ಲಿ 1ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ್ದಾರೆ. ಮನೆಗೆ ಮರಳಿದ ಬಾಲಕಿ ಪೋಷಕರಲ್ಲಿ ವಿಷಯ ತಿಳಿಸಿದ್ದು ಅವರು ತಕ್ಷಣ ಶಾಲೆಯ ಆಡಳಿತ ವರ್ಗದವರಿಗೆ ಹಾಗೂ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಆದರೆ ಶಾಲೆಯವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಆಗಸ್ಟ್ 22ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಮೂವರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳಿಸಿದ್ದು ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಗಂಭೀರ ಅಪರಾಧದ ಬಗ್ಗೆ ಪೊಲೀಸರಿಗೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡದೆ, ಸ್ವತಃ ತನಿಖೆ ನಡೆಸಲು ಮುಂದಾಗಿರುವ ಪ್ರಾಂಶುಪಾಲರ ವರ್ತನೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಅಪರಾಧವಾಗಿದೆ.

ಪ್ರಾಂಶುಪಾಲರ ವಿರುದ್ಧವೂ ಪೋಕ್ಸೋ ಹಾಗೂ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಮಾಕಾಂತ್ ಸಾಹು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News