×
Ad

ಜೆಎನ್‌ಯುಗೆ ರೋಮಿಲಾ ಥಾಪರ್ ಅವರ ಬಯೋಡಾಟಾ ನೋಡಬೇಕಂತೆ!

Update: 2019-09-01 11:36 IST

  ಹೊಸದಿಲ್ಲಿ, ಸೆ.1: ಕೇಂದ್ರ ಸರಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸುತ್ತಿರುವ ಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್‌ರನ್ನು ಗೌರವ ಪ್ರೊಫೆಸರ್ ಆಗಿ ಮುಂದುವರಿಸಬೇಕೇ ಎಂದು ನಿರ್ಧರಿಸಲು ಜವಾಹರಲಾಲ್ ನೆಹರೂ ಯೂನಿವರ್ಸಿಟಿಯು ಥಾಪರ್ ಅವರಿಂದ ಸಿವಿ(ವೈಯಕ್ತಿಕ, ಶೈಕ್ಷಣಿಕ ವಿವರ)ಸಲ್ಲಿಸುವಂತೆ ಸೂಚಿಸಿದೆ.

 87 ವಯಸ್ಸಿನ ಥಾಪರ್‌ಗೆ ಕಳೆದ ತಿಂಗಳು ಬಯೋಡಾಟಾ ಸಲ್ಲಿಸುವಂತೆ ಜೆಎನ್‌ಯು ರಿಜಿಸ್ಟ್ರಾರ್ ಪ್ರಮೋದ್ ಕುಮಾರ್ ಪತ್ರದ ಮೂಲಕ ಸೂಚಿಸಿದ್ದರು. ವಿಶ್ವವಿದ್ಯಾಲಯದಿಂದ ಆಯ್ಕೆ ಮಾಡಿರುವ ಸಮಿತಿಯು ನಿಮ್ಮ ಕೆಲಸವನ್ನು ವೌಲ್ಯಮಾಪನ ಮಾಡಬಹುದು ಹಾಗೂ ನಿಮ್ಮನ್ನು ಗೌರವ ಪ್ರೊಫೆಸರ್ ಆಗಿ ಮುಂದುವರಿಸಬೇಕೇ ಎಂದು ನಿರ್ಧರಿಸಲಿದೆ ಎಂದು ರಿಜಿಸ್ಟ್ರಾರ್ ತಿಳಿಸಿದ್ದರು.

   ಮೂವರು ಹಿರಿಯ ಪ್ರಾಧ್ಯಾಪಕರು ಜೆಎನ್‌ಯು ರಿಜಿಸ್ಟ್ರಾರ್ ಅವರ ನಿರ್ಧಾರಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಗೌರವ ಪ್ರಾಧ್ಯಾಪಕರಲ್ಲಿ ಬಯೋಡಾಟಾ ಸಲ್ಲಿಸುವಂತೆ ಈ ತನಕ ಕೇಳಿಲ್ಲ. ಒಮ್ಮೆ ಅವರನ್ನು ಆಯ್ಕೆ ಮಾಡಿದ ಬಳಿಕ ಅವರು ಜೀವನಪರ್ಯಂತ ಅದೇ ಹುದ್ದೆಯಲ್ಲಿ ಮುಂದುವರಿಯಬಹುದಾಗಿದೆ ಎಂದು ಪ್ರೊಫೆಸರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

‘‘ಇದೊಂದು ಶುದ್ಧ ರಾಜಕೀಯ ಪ್ರೇರಿತ ಕ್ರಮ. ಥಾಪರ್ ಅವರು ಶಿಕ್ಷಣ ಖಾಸಗೀಕರಣ, ಜೆಎನ್‌ಯು ಸಹಿತ ಎಲ್ಲ ಸಂಸ್ಥೆಗಳ ಸ್ವಾಯತ್ತತೆಯ ಸವೆತ ಹಾಗೂ ಸಂಸ್ಥೆಗಳಿಂದ ಭಿನ್ನಾಭಿಪ್ರಾಯವನ್ನು ಪುಡಿಗಟ್ಟುವ ನೀತಿಗಳ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿದ್ದರು’’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪ್ರಾಧ್ಯಾಪಕರು ಹೇಳಿದ್ದಾರೆ.

ಗೌರವ ಪ್ರಾಧ್ಯಾಪಕ ಹುದ್ದೆಗೆ ಕೇವಲ ಆಯ್ದ ಅಂತರ್‌ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞರನ್ನು ಆಯ್ಕೆ ಮಾಡಲಾಗುತ್ತದೆ. ಜೆಎನ್‌ಯುನಲ್ಲಿ ನಿವೃತ್ತ ಪ್ರಾಧ್ಯಾಪಕರ ಹೆಸರನ್ನು ಕೇಂದ್ರ ಸರಕಾರ ಪ್ರಸ್ತಾವ ಮಾಡುತ್ತದೆ. ಸಂಬಂಧಿತ ಅಧ್ಯಯನ ಮಂಡಳಿ ಹಾಗೂ ವಿಶ್ವವಿದ್ಯಾಲಯದ ಶೈಕ್ಷಣಿಕ ಕೌನ್ಸಿಲ್ ಹಾಗೂ ಕಾರ್ಯಕಾರಿ ಕೌನ್ಸಿಲ್ ಹೆಸರನ್ನು ಅಂತಿಮಗೊಳಿಸುತ್ತದೆ.

ಈ ಹುದ್ದೆಯಲ್ಲಿರುವ ಶಿಕ್ಷಣ ತಜ್ಞರಿಗೆ ಯಾವುದೇ ಹಣಕಾಸು ಲಾಭವಿರುವುದಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಲು ಕೊಠಡಿಯೊಂದನ್ನು ಕೇಂದ್ರ ಒದಗಿಸುತ್ತದೆ. ಇವರು ಕೆಲವೊಮ್ಮೆ ಉಪನ್ಯಾಸ ನೀಡುತ್ತಾರೆ ಹಾಗೂ ಸಂಶೋಧನ ವಿದ್ಯಾರ್ಥಿಗಳ ಮೇಲ್ವಿಚಾರಣೆ ನಡೆಸುತ್ತಾರೆ.

 ಆರಂಭಿಕ ಭಾರತೀಯ ಇತಿಹಾಸದಲ್ಲಿ ವಿಶೇಷ ಪರಿಣತಿ ಪಡೆದಿರುವ ರೋಮಿಲಾ ಥಾಪರ್ ಸುಮಾರು 6 ದಶಕಗಳ ಕಾಲ ಪ್ರಾಧ್ಯಾಪಕಿ ಹಾಗೂ ಸಂಶೋಧಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1970ರಿಂದ 1991ರ ತನಕ ಜೆಎನ್‌ಯುನಲ್ಲಿ ಪ್ರೊಫೆಸರ್ ಆಗಿದ್ದರು. 1993ರಲ್ಲಿ ಗೌರವ ಪ್ರಾಧ್ಯಾಪಕಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಅಮೆರಿಕ ಲೈಬ್ರರಿ ಆಫ್ ಕಾಂಗ್ರೆಸ್‌ನಿಂದ ಪ್ರತಿಷ್ಠಿತ ಕ್ಲುಗೆ ಪ್ರಶಸ್ತಿಗೆ ಭಾಜನರಾಗಿದ್ದರು.

ರೋಮಿಲಾ ಥಾಪರ್ ಬರೆದ ‘ದಿ ಪಬ್ಲಿಕ್ ಇಂಟಲೆಕ್ಚುವೆಲ್ ಇನ್ ಇಂಡಿಯಾ’ ಪುಸ್ತಕ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿಮರ್ಶಾತ್ಮಕವಾಗಿ ಅವಲೋಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News