ನಾಳೆ ಕುಲಭೂಷಣ್ ಜಾಧವ್‌ಗೆ ಭಾರತದ ರಾಯಭಾರಿ ಕಚೇರಿ ಜೊತೆ ಸಂಪರ್ಕ
Update: 2019-09-01 21:42 IST
ಹೊಸದಿಲ್ಲಿ,ಸೆ.1: ಭಯೋತ್ಪಾದನೆ ಹಾಗೂ ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕವನ್ನು ಸೋಮವಾರ ತಾನು ಒದಗಿಸುವುದಾಗಿ ಪಾಕ್ ತಿಳಿಸಿದೆ.
ದೂತಾವಾಸ ಸಂಬಂಧಗಳ ಕುರಿತಾದ ವಿಯೆನ್ನಾ ಒಡಂಬಡಿಕೆ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹಾಗೂ ಪಾಕಿಸ್ತಾನದ ಕಾನೂನುಗಳಿಗೆ ಅನುಗುಣವಾಗಿ ಜಾಧವ್ ಅವರೊಂದಿಗೆ ರಾಯಭಾರ ಕಚೇರಿಯ ಸಂಪರ್ಕವನ್ನು ಹೊಂದಲು ಭಾರತಕ್ಕೆ ಅನುಮತಿ ನೀಡಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯ ರವಿವಾರ ಟ್ವೀಟ್ ಮಾಡಿದೆ.
2017ರ ಎಪ್ರಿಲ್‌ನಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ತೀರ್ಪು ವಿಧಿಸಲ್ಪಟ್ಟ ಬಳಿಕ 49 ವರ್ಷ ವಯಸ್ಸಿನ ಕುಲಭೂಷಣ್ ಜಾಧವ್‌ಗೆ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕ ಒದಗಿಸಿರುವುದು ಇದೇ ಮೊದಲ ಸಲವಾಗಿದೆ.