×
Ad

ಜಮ್ಮುಕಾಶ್ಮೀರ ವಿವಾದ: ದ.ಏಶ್ಯ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಭಾರತ-ಪಾಕ್ ವಾಗ್ವಾದ

Update: 2019-09-01 22:04 IST

  ಮಾಲೆ(ಮಾಲ್ದೀವ್ಸ್), ಸೆ.1: ಇಲ್ಲಿ ರವಿವಾರ ನಡೆದ ದಕ್ಷಿಣ ಏಶ್ಯ ರಾಷ್ಟ್ರಗಳ ಸ್ಪೀಕರ್‌ಗಳ ಸಮಾವೇಶದಲ್ಲಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದತಿಯನ್ನು ಭಾರತ ಸರಕಾರ ರದ್ದುಪಡಿಸಿರುವುದನ್ನು ಪ್ರಸ್ತಾವಿಸಲು ಪಾಕ್ ಯತ್ನಿಸಿದಾಗ ಉಭಯದೇಶಗಳ ನಡುವೆ ಕಾವೇರಿದ ವಾಗ್ವಾದ ನಡೆದಿರುವುದಾಗಿ ವರದಿಯಾಗಿದೆ.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪಾಕ್ ಪ್ರತಿನಿಧಿಯು ಕಾಶ್ಮೀರ ವಿವಾದವನ್ನು ಪ್ರಸ್ತಾವಿಸಲು ಯತ್ನಿಸಿದರು. ಆಗ ಉಪಸ್ಥಿತರಿದ್ದ ರಾಜ್ಯಸಭೆಯ ಉಪಸ್ಪೀಕರ್ ಹರಿವಂಶ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

  ‘‘ಭಾರತದ ಆಂತರಿಕ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿರುವುದನ್ನು ಬಲವಾಗಿ ವಿರೋಧಿಸುತ್ತೇವೆ ಹಾಗೂ ಈ ಶೃಂಗಸಭೆಯ ವ್ಯಾಪ್ತಿಗೆ ಹೊರತಾದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ವೇದಿಕೆಯನ್ನು ರಾಜಕೀಕರಣಗೊಳಿಸುವುದನ್ನು ತಿರಸ್ಕರಿಸುತ್ತೇವೆ’’ ಎಂದು ಹರಿವಂಶ್ ತಿಳಿಸಿದರು.

ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಭಾರತೀಯ ನಿಯೋಗದ ನೇತೃತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಹಿಸಿದ್ದರು.

 ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ವಿಷಯವನ್ನು ಪಾಕಿಸ್ತಾನವು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾವಿಸಲು ಯತ್ನಿಸುತ್ತಿದೆ. ಆದರೆ ಭಾರತವು ಅದು ತನ್ನ ಆಂತರಿಕ ವಿಚಾರವೆಂದು ಪ್ರತಿಪಾದಿಸಿದೆ.

ಈ ಮಧ್ಯೆ ಪಾಕ್ ವಿದೇಶಾಂಗ ಸಚಿವ ಶಾ ಮುಹಮ್ಮದ್ ಖುರೇಶಿ ಅವರು ಹೇಳಿಕೆಯೊಂದನ್ನು ನೀಡಿ, ಕಾಶ್ಮೀರ ವಿವಾದವನ್ನು ಸೆೆಪ್ಟೆಂಬರ್ 2ರಂದು ಯುರೋಪ್ ಒಕ್ಕೂಟದ ಸಭೆಯಲ್ಲಿ ಚರ್ಚಿಸದಂತೆ ತಡೆಯಲು ಭಾರತವು ವಿಫಲ ಯತ್ನ ನಡೆಸಿತ್ತೆಂದು ಆಪಾದಿಸಿದ್ದಾರೆ.

ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಭಾಷಣ ಮಾಡಲಿದ್ದು, ಅವರು ಕಾಶ್ಮೀರ ವಿವಾದದ ಬಗ್ಗೆ ಮಂಡಿಸಲಿರುವ ಇಡೀ ಜಗತ್ತು ವೀಕ್ಷಿಸಲಿದೆಯೆಂದು ಹೇಳಿದ್ದಾರೆ. ಜಮ್ಮುಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಪಾಕಿಸ್ತಾನವು ಭಾರತದ ಜೊತೆ ಸಂಧಾನ ನಡೆಸಲು ಪ್ರಯತ್ನಿಸುತ್ತಿದೆಯೆಂಬ ವರದಿಗಳನ್ನು ಕೂಡಾ ಖುರೇಶಿ ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News