ದಾದ್ರಾ, ನಗರ್ ಹವೇಲಿಯಲ್ಲಿ ಅಮಿತ್ ಶಾ ರ‍್ಯಾಲಿಗೆ ಜನರನ್ನು ಸೇರಿಸಲು ಆದೇಶ ನೀಡಿದ್ದ ಆಡಳಿತ !

Update: 2019-09-01 18:06 GMT

ಜೈಪುರ, ಸೆ. 1: ಕೇಂದ್ರಾಡಳಿತ ಪ್ರದೇಶ ದಾದ್ರಾ ಹಾಗೂ ನಗರ್ ಹವೇಲಿಯಲ್ಲಿ ಸೆ. 1ರಂದು ನಡೆದ ಬಿಜೆಪಿಯ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿಗೆ ಕಾರ್ಮಿಕರನ್ನು ಸಜ್ಜುಗೊಳಿಸುವಂತೆ ಹಾಗೂ ಕರೆದುಕೊಂಡು ಬರುವಂತೆ ದಾದ್ರಾ ಹಾಗೂ ನಗರ ಹವೇಲಿ ಆಡಳಿತ ವಿದ್ಯುತ್, ಕಾರ್ಮಿಕ ಹಾಗೂ ಕೈಗಾರಿಕೆ ಇಲಾಖೆಗೆ ನೋಟಿಸು ಜಾರಿ ಮಾಡಿತ್ತು.

 ಈ ಆದೇಶದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜಕೀಯ ಕಾರ್ಯಕ್ರಮಗಳಿಗೆ ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೈಗಾರಿಕೆಗಳ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪ ಕಾರ್ಮಿಕ ಆಯುಕ್ತರಿಗೆ ನೀಡಿದ ನೋಟಿಸಿನಲ್ಲಿ ಕೈಗಾರಿಕೆ ನಿರ್ದೇಶಕ ಕರಣ್‌ಜಿತ್ ವಡೋದರಿಯಾ ಅವರು, ಅಮಿತ್ ಶಾ ಭೇಟಿ ನೀಡುವ ಸಂದರ್ಭ ಸಣ್ಣ ಕಾರ್ಖಾನೆಗಳಿಂದ ಕೈಗಾರಿಕಾ ಕಾರ್ಮಿಕರನ್ನು ಸಜ್ಜುಗೊಳಿಸಲು ನೋಡಲ್ ಅಧಿಕಾರಿಯಾಗಿ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದರು.

ಆದೇಶದ ಅಂತ್ಯದಲ್ಲಿ ನಿರ್ದೇಶಕರು ಅಮಿತ್ ಶಾ ಅವರ ರ‍್ಯಾಲಿಗೆ ಉದ್ಯೋಗಿಗಳನ್ನು ಸಾಗಿಸಲು ಬಳಸುವ ವಾಹನಗಳ ವಿವರಗಳನ್ನು ಪರಿಶೀಲಿಸಲು ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಹೊಂದುವ ನಿರ್ಧಿಷ್ಟ ಅಧಿಕಾರಿಗಳ ಪಟ್ಟಿಯನ್ನು ನೀಡಿದ್ದರು.

ರ‍್ಯಾಲಿಗೆ ಭೇಟಿ ನೀಡಲು ಸೂಕ್ತ ವ್ಯವಸ್ಥೆ ಆಯೋಜಿಸುವ ಅಧಿಕಾರವನ್ನು ಈ ಅಧಿಕಾರಿಗಳಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News