×
Ad

ದುಲೀಪ್ ಟ್ರೋಫಿ: ಇಂಡಿಯಾ ರೆಡ್-ಗ್ರೀನ್ ಪಂದ್ಯ ಡ್ರಾ

Update: 2019-09-01 23:13 IST
ಅವೇಶ್ ಖಾನ್

ಬೆಂಗಳೂರು, ಸೆ.1: ಅವೇಶ್ ಖಾನ್ ಸಿಡಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಇಂಡಿಯಾ ರೆಡ್ ತಂಡ ಇಂಡಿಯಾ ಗ್ರೀನ್ ವಿರುದ್ಧದ ದುಲೀಪ್ ಟ್ರೋಫಿಯ ಅಂತಿಮ ಲೀಗ್ ಪಂದ್ಯವನ್ನು ಡ್ರಾಗೊಳಿಸಿದೆ. ಇಂಡಿಯಾ ಬ್ಲೂನೊಂದಿಗೆ ಸಮಾನ ಅಂಕ ಹಂಚಿಕೊಂಡರೂ ಉತ್ತಮ ರನ್‌ರೇಟ್ ಆಧಾರದಲ್ಲಿ ಇಂಡಿಯಾ ಗ್ರೀನ್ ಫೈನಲ್‌ಗೆ ತಲುಪಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆ.4ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆ.

ಕೊನೆಯ ದಿನದಾಟವಾದ ರವಿವಾರ ಖಾನ್ 56 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್‌ಗಳ ಸಹಿತ 64 ರನ್ ಗಳಿಸಿದ್ದಲ್ಲದೆ, ಸಂದೀಪ್ ವಾರಿಯರ್ ಜೊತೆ ಅಂತಿಮ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿ ರೆಡ್ ತಂಡ 441 ರನ್ ಗಳಿಸಿ ಆಲೌಟಾಗಲು ನೆರವಾದರು. ರೆಡ್ ತಂಡ ಒಂದು ರನ್ ಇನಿಂಗ್ಸ್ ಮುನ್ನಡೆ ಪಡೆದು ಮೂರಂಕವನ್ನು ತನ್ನದಾಗಿಸಿಕೊಂಡಿತು.

ಗ್ರೀನ್ ತಂಡದ 440 ರನ್‌ಗೆ ಉತ್ತರಿಸಹೊರಟ ರೆಡ್ ತಂಡ ಒಂದು ಹಂತದಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 368 ರನ್ ಗಳಿಸಿತ್ತು. ಆಗ ಜೊತೆಯಾದ ಅವೇಶ್ ಖಾನ್ ಹಾಗೂ ಸಂದೀಪ್ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಒಟ್ಟು ಆರು ಅಂಕ ಗಳಿಸಿರುವ ಇಂಡಿಯಾ ರೆಡ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. 56 ಎಸೆತಗಳ ಇನಿಂಗ್ಸ್ ನಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದ ಖಾನ್ ಮೂರಂಕವನ್ನು ಗಳಿಸಬೇಕೆಂಬ ಗ್ರೀನ್ ತಂಡದ ಕನಸನ್ನು ಭಗ್ನಗೊಳಿಸಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಗ್ರೀನ್ ತಂಡ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 54 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 98 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್

► ಇಂಡಿಯಾ ಗ್ರೀನ್: 440 ರನ್‌ಗೆ ಆಲೌಟ್ ಹಾಗೂ 3 ವಿಕೆಟ್ ನಷ್ಟಕ್ಕೆ 54 ರನ್(ಧುೃವ್ ಶೋರೆ ಔಟಾಗದೆ 44)

► ಇಂಡಿಯಾ ರೆಡ್: 145.3 ಓವರ್‌ಗಳಲ್ಲಿ 441 ರನ್‌ಗಳಿಗೆ ಆಲೌಟ್

(ಮಹಿಪಾಲ್ ಲೊಮ್‌ರೊರ್ 126, ಕರುಣ್ ನಾಯರ್ 90, ಅವೇಶ್ ಖಾನ್ 64, ಡಿ.ಜಡೇಜ 4-135, ಅಂಕಿತ್ ರಾಜ್‌ಪೂತ್ 3-71)

► ಅಂಕಗಳು:

ಇಂಡಿಯಾ ರೆಡ್:3, ಇಂಡಿಯಾ ಗ್ರೀನ್:1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News