×
Ad

ಮಕ್ಕಳ ಅಪಹರಣ ಶಂಕೆ: ಮೂಗಿ ಗರ್ಭಿಣಿ ಮೇಲೆ ಗುಂಪುದಾಳಿ

Update: 2019-09-02 09:59 IST

ಹೊಸದಿಲ್ಲಿ: ಮಕ್ಕಳ ಅಪಹರಣ ಶಂಕೆಯಿಂದ ಮಾತು ಬಾರದ ಐದು ತಿಂಗಳ ಗರ್ಭಿಣಿ ಮೇಲೆ ಗುಪು ಹಲ್ಲೆ ನಡೆದ ಘಟನೆ ಪೂರ್ವ ದೆಹಲಿಯ ಮಾಂಡೋಲಿ ಬಡಾವಣೆಯಲ್ಲಿ ಕಳೆದ ಮಂಗಳವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದಯವಿಟ್ಟು ಹೊಡೆಯಬೇಡಿ ಎಂಬರ್ಥದಲ್ಲಿ ಅಂಗಲಾಚುತ್ತಾ, ಕುಡಿಯಲು ನೀರು ಕೊಡುವಂತೆ ಬೇಡುತ್ತಿರುವ ಪ್ರಿಯಾಂಕಾ (26) ಎಂಬ ಮಹಿಳೆಯ ಮೇಲೆ ಗುಂಪು ನಿರ್ದಯವಾಗಿ ಹಲ್ಲೆ ಮಾಡುತ್ತಿರುವ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊ ಮೂಲಕ ಆಕೆಯ ಕುಟುಂಬದವರು ಮಹಿಳೆಯ ಚಲನ ವಲನದ ಜಾಡು ಹಿಡಿದು ಆಕೆಯನ್ನು ಕರೆ ತಂದಿದ್ದಾರೆ.

ಈ ವೀಡಿಯೊ ಆಧಾರದಲ್ಲಿ ಪೊಲೀಸರು ರವಿವಾರ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರೀಶಿಯನ್ ದೀಪಕ್ (27),  ಶಕುಂತಲಾ (52) ಮತ್ತು ವೃತ್ತಿಪರ ಛಾಯಾಗ್ರಾಹಕ ಲಲಿತ್ ಕುಮಾರ್ (29) ಎಂಬುವವರನ್ನು ಹಲ್ಲೆ ಆರೋಪದಲ್ಲಿ ಬಂಧಿಸಲಾಗಿದೆ.

"ಮಹಿಳೆ ಅಪಹರಣಕಾರ್ತಿ ಎನ್ನುವುದಕ್ಕೆ ಯಾವ ಪುರಾವೆಯೂ ಸಿಕ್ಕಿಲ್ಲ. ಈ ವೀಡಿಯೊ ವೈರಲ್ ಆದ ಬಳಿಕ ಅಕ್ರಮವಾಗಿ ಹಿಡಿದಿಟ್ಟುಕೊಂಡು ಗಾಯಗೊಳಿಸಿದ ಸಂಬಂಧ ಹರ್ಷವಿಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

"ಮಕ್ಕಳನ್ನು ಅಪಹರಣ ಮಾಡಿದ ಶಂಕೆಯಿಂದ ಗುಂಪು, ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿ ನಾವು ಕೂಡಾ ಹೊಡೆದಿರುವುದು ನಿಜ" ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅವರು ವಿವರಿಸಿದರು. ಇತರರನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ. ಈ ಮಹಿಳೆಯ ಕುಟುಂಬದವರು ದಕ್ಷಿಣ ದೆಹಲಿ ತುಘಲಕಾಬಾದ್ ಕೊಳಗೇರಿಯಲ್ಲಿದ್ದು, ಕಳೆದ ವರ್ಷ ಫರಿದಾಬಾದ್‌ನ ನೈರ್ಮಲ್ಯ ಕಾರ್ಮಿಕನೊಬ್ಬನ ಜತೆ ಈಕೆಯ ವಿವಾಹವಾಗಿತ್ತು. ಇತ್ತೀಚಿನ ದಿನಗಳಲ್ಲಿ ಆಕೆಯ ಪತಿ ಹಾಗೂ ಕುಟುಂಬ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯ ತಾಯಿ ಫರಿದಾಬಾದ್ ಠಾಣೆಯಲ್ಲಿ ದೂರು ನೀಡಿದ್ದರು.

ಆ ಬಳಿಕ ಗರ್ಭಿಣಿ ಮಹಿಳೆ ನಾಪತ್ತೆಯಾಗಿರುವ ಬಗ್ಗೆಯೂ ಎಫ್‌ಐಆರ್ ದಾಖಲಿಸಲಾಗಿತ್ತು. ವರದಕ್ಷಿಣೆ ಕಿರುಕುಳ ನೀಡಿ ಆ. 18ರಂದು ಆಕೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಲಾಗಿತ್ತು ಎಂದು ಆಕೆಯ ಸಹೋದರ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News