‘ಭಾರತ ಸುರಕ್ಷಿತ ಎಂದು ಭಾವಿಸಿದ್ದೆವು’: ಎನ್ಆರ್ ಸಿ ವಿರುದ್ಧ ಹಿಂದೂ ಬಾಹುಳ್ಯದ ಗ್ರಾಮಸ್ಥರ ಆಕ್ರೋಶ

Update: 2019-09-02 14:41 GMT
ಸಾಂದರ್ಭಿಕ ಚಿತ್ರ

ಗುವಹಾಟಿ, ಸೆ.2: ಅಸ್ಸಾಂನ ಸಿಲ್ಚಾರ್ ನಗರದ ಹೊರವಲಯದಲ್ಲಿರುವ ಬಂಗಾಳಿ ಹಿಂದುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಹಲವು ನಿವಾಸಿಗಳ ಹೆಸರು ಇತ್ತೀಚೆಗೆ ಬಿಡುಗಡೆಯಾದ ಅಂತಿಮ ಎನ್‍ಆರ್‍ ಸಿ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಟೋರಾ ಅಗರ್ವಾಲಾ ಅವರ ವಿಶೇಷ ಲೇಖನವನ್ನು indianexpress.com ಪ್ರಕಟಿಸಿದೆ.

ಕಚರ್ ಜಿಲ್ಲೆಯ ಸಿಲ್ಚಾರ್ ನ ಹೊರವಲಯದಲ್ಲಿರುವ ಛೋಟುದುಧ್‍ ಪಾಟೀಲ್ ಶೇ. 100ರಷ್ಟು ಹಿಂದು ಬಂಗಾಳಿಗಳಿರುವ ಪ್ರದೇಶವಾಗಿದೆ. ಈ ಗ್ರಾಮದಲ್ಲಿ ಮಿಠಾಯಿ ಅಂಗಡಿ ನಡೆಸುವ ರಾಮಕಂಠ ಬಿಸ್ವಾಸ್, ಅವರ ಸೋದರ ಖಿತಿಶ್, ತಾಯಿ ಬಸಂತಿ ಹಲವಾರು ವರ್ಷಗಳ ಕಾಲ ಡಿ ಮತದಾರರು ಅಥವಾ ಶಂಕಿತ ಮತದಾರರು ಎಂದು ಗುರುತಿಸಲ್ಪಟ್ಟು ನಂತರ ಫಾರಿನರ್ಸ್ ಟ್ರಿಬ್ಯುನಲ್ ನಲ್ಲಿ ತಮ್ಮ ಭಾರತೀಯತೆ ಸಾಬೀತು ಪಡಿಸಿದ್ದರು. ಆದರೆ ಈಗ ಅಂತಿಮ ಎನ್‍ಆರ್ ಸಿ ಪಟ್ಟಿಯಲ್ಲಿ ರಾಮಕಂಠ ಹಾಗೂ ಖಿತಿಶ್, ಮತ್ತವರ ಕಿರಿಯ ಸೋದರ ಲಾಖಿಕಂಠ ಹೆಸರಿಲ್ಲ. ತಾಯಿ ಬಸಂತಿ ಹಾಗೂ ಇನ್ನೊಬ್ಬ ಸೋದರ ಕಾಳಿಕಂಠರ ಹೆಸರು ಮಾತ್ರ ಪಟ್ಟಿಯಲ್ಲಿದೆ.

“ನಾವು ಭಾರತ ನಮಗೆ ಸುರಕ್ಷಿತವೆಂದು ಅಂದುಕೊಂಡಿದ್ದೆವು. ಆದರೆ ಇದು ಯಾವ ವಿಧದ ಸುರಕ್ಷತೆ ?'' ಎಂದು ರಾಮಕಂಠ ಕೋಪದಿಂದ ನುಡಿಯುತ್ತಾರೆ.

ರಾಮಕಂಠ ಮತ್ತವರ ಸೋದರರೆಲ್ಲಾ ಇದೇ ಗ್ರಾಮದಲ್ಲಿ ಹುಟ್ಟಿದವರು. ಅವರ ತಂದೆ ಆಗಿನ ಪೂರ್ವ ಪಾಕಿಸ್ತಾನದ ಗಡಿ ದಾಟಿ ಜೀವನೋಪಾಯಕ್ಕಾಗಿ ಭಾರತಕ್ಕೆ 1956ರಲ್ಲಿ ಆಗಮಿಸಿದ್ದರು. ಅವರ ತಾಯಿ ಬಸಂತಿ ಅದಕ್ಕಿಂತಲೂ ಮುಂಚೆ ಭಾರತಕ್ಕೆ ಬಂದಿದ್ದರು.

ಐವತ್ತೆರಡು ವರ್ಷದ ಬಿಧನ್ ಶಂಕರ್ ಅವರ ತಾಯಿ ಮತ್ತು ಪತ್ನಿಯ ಹೆಸರು ಕೂಡ ಪಟ್ಟಿಯಲ್ಲಿಲ್ಲ. “ನಮ್ಮನ್ನೇಕೆ ಇದರಲ್ಲಿ ಶಾಮೀಲಾಗಿಸಲಾಗಿದೆ. ನಾವು ಹಿಂದೂಗಳು” ಎಂದು ಬಿಧನ್ ಶಂಕರ್ ಹೇಳುತ್ತಾರೆ.

ದಕ್ಷಿಣ ಅಸ್ಸಾಂನ ಬಾರಕ್ ವ್ಯಾಲಿಯಲ್ಲಿರುವ ಮೂರು ಜಿಲ್ಲೆಗಳಾದ ಕಚರ್, ಕರೀಂಗಂಜ್ ಹಾಗೂ ಹೈಲಕಂಡಿ ಎಂಬಲ್ಲಿ ದೇಶ ವಿಭಜನೆಯಾದಂದಿನಿಂದ ಹಲವಾರು ವಲಸಿಗರು ತಳವೂರಿದ್ದಾರೆ.

ಆದರೆ ಇಲ್ಲಿ ಪ್ರತಿಯೊಂದು ಮನೆಯಿಂದ ಯಾರಾದರೂ ಒಬ್ಬರ ಹೆಸರು ಪಟ್ಟಿಯಲ್ಲಿಲ್ಲ. ಹೆಚ್ಚಿನವರು 1971ಕ್ಕಿಂತಲೂ ಮೊದಲೇ ಭಾರತಕ್ಕೆ ರಕ್ಷಣೆ ಕೋರಿ ಬಂದವರು ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

“ಪೋಷಕರನ್ನು ಬಿಟ್ಟು ಮಕ್ಕಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸಹೋದರರನ್ನು ಬಿಟ್ಟು ಸಹೋದರಿಯರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ನಾವು ರಕ್ಷಣೆ ಕೋರಿ ಭಾರತಕ್ಕೆ ಬಂದಿದ್ದೆವು” ಎಂದು ಉಪ್ಪಲ್ ಪಾಲ್ ಎಂಬವರು ಹೇಳುತ್ತಾರೆ.

“ಇಲ್ಲಿ ಪ್ರತಿಯೊಂದು ಮನೆಯಲ್ಲಿ ಕೆಲವರನ್ನಾದರೂ ಎನ್ ಆರ್ ಸಿಯಿಂದ ಕೈಬಿಡಲಾಗಿದೆ. ಇದು ಹೇಗೆ ನ್ಯಾಯವಾಗಲು ಸಾಧ್ಯ?, ಬಿಜೆಪಿ ನಮ್ಮನ್ನು ರಕ್ಷಿಸಬೇಕಿತ್ತಲ್ಲವೇ?” ಎಂದವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News