ಛತ್ತೀಸ್‌ಗಢದ ಮಾಜಿ ಸಿಎಂ ಅಜಿತ್ ಜೋಗಿ ಪುತ್ರ ಅಮಿತ್ ಜೋಗಿ ಸೆರೆ
Update: 2019-09-03 13:26 IST
ಹೊಸದಿಲ್ಲಿ, ಸೆ,3: ನಕಲಿ ಪ್ರಮಾಣ ಪತ್ರ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಪುತ್ರ ಅಮಿತ್ ಜೋಗಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಿಜೆಪಿ ಮುಖಂಡರಾದ ಸಮೀರಾ ಪೈಕ್ರಾ ಅವರು ನೀಡಿದ್ದ ದೂರಿನ ಮೇರೆಗೆ 42ರ ಹರೆಯದ ಅಮಿತ್ ಜೋಗಿ ಅವರನ್ನು ಬಿಲಾಸ್‌ಪುರದಲ್ಲಿರುವ ತನ್ನ ಮನೆಯಿಂದ ಬಂಧಿಸಲಾಗಿದೆ. ಅಮಿತ್ ಅವರು ತಮ್ಮ ಊರು, ಹುಟ್ಟಿದ ವರ್ಷ ಹಾಗೂ ಅವರ ಜಾತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸಮೀರಾ ಪೈಕ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಿಲಾಸ್‌ಪುರ ಜಿಲ್ಲೆಯ ಎಸ್‌ಟಿ ಮೀಸಲು ಕ್ಷೇತ್ರ ಮಾರ್ವಾಹಿಯಿಂದ ಅಮಿತ್ 2013 ರ ವಿಧಾನಸಭಾ ಚುನಾವಣೆಯಲ್ಲಿ ಸಮೀರಾ ವಿರುದ್ಧ ಸ್ಪರ್ಧಿಸಿ ಜಯ ಗಳಿಸಿದ್ದರು.
ಚುನಾವಣೆಯಲ್ಲಿ ಸೋತ ನಂತರ 2014 ರಲ್ಲಿ ಸಮೀರಾ ಪೈಕ್ರ ಅವರು ಅಮಿತ್ ಜೋಗಿಯ ಜಾತಿ ಮತ್ತು ಜನ್ಮಸ್ಥಳವನ್ನು ಪ್ರಶ್ನಿಸಿ ಬಿಲಾಸ್ಪುರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು.