ಹೆಲ್ಮೆಟ್ ಧರಿಸದ, ದಾಖಲೆಗಳು ಹೊಂದಿಲ್ಲದ ಬೈಕ್ ಸವಾರನಿಗೆ 23 ಸಾವಿರ ರೂ. ದಂಡ

Update: 2019-09-03 14:34 GMT
ಸಾಂದರ್ಭಿಕ ಚಿತ್ರ

ಚಂಡೀಗಢ, ಸೆ.3: ದಾಖಲೆ ಪತ್ರಗಳಿಲ್ಲದೆ, ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗೆ ಹರ್ಯಾಣದ ಗುರುಗ್ರಾಮ ಜಿಲ್ಲೆಯ ಪೊಲೀಸರು ಒಟ್ಟು 23,000 ರೂ. ದಂಡ ವಿಧಿಸಿದ್ದಾರೆ.

ಸೆ.1ರಿಂದ ಜಾರಿಗೆ ಬಂದಿರುವ ಹೊಸ ಸಂಚಾರಿ ನಿಯಮದಡಿ ಈ ದಂಡ ವಿಧಿಸಲಾಗಿದೆ. ಪೂರ್ವ ದಿಲ್ಲಿಯ ನಿವಾಸಿ ದಿನೇಶ್ ಮದನ್ ತಮ್ಮ ಬೈಕ್‌ನಲ್ಲಿ ಹರ್ಯಾಣದ ಗುರುಗ್ರಾಮದತ್ತ ತೆರಳುತ್ತಿದ್ದಾಗ ಅವರನ್ನು ಗುರುಗ್ರಾಮ ಜಿಲ್ಲಾ ನ್ಯಾಯಾಲಯದಲ್ಲಿ ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸದೆ ವಾಹನ ಓಡಿಸಿದ್ದಕ್ಕೆ 1,000 ರೂ. ದಂಡ ವಿಧಿಸುವಂತೆ ಸೂಚಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಮದನ್ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ, ಅದಕ್ಕಾಗಿ 5000 ರೂ. ದಂಡ, ಆರ್‌ಸಿ (ನೋಂದಣಿ ಪತ್ರ) ಇರದ ಕಾರಣ 5,000 ರೂ, ಥರ್ಡ್ ಪಾರ್ಟಿ ಇನ್ಶೊರೆನ್ಸ್ ಇಲ್ಲದಕ್ಕೆ 2000 ರೂ, ವಾಹನವು ವಾಯುಮಾಲಿನ್ಯ ಪ್ರಮಾಣ ಮೀರಿದ್ದಕ್ಕೆ 10,000 ರೂ ದಂಡ ವಿಧಿಸಿದ್ದಾರೆ.

ಈ ಎಲ್ಲಾ ದಾಖಲೆಗಳೂ ತನ್ನಲ್ಲಿದ್ದರೂ ವಾಹನದಲ್ಲಿರಲಿಲ್ಲ. ಮನೆಯಲ್ಲಿ ಬಿಟ್ಟು ಬಂದಿದ್ದೆ. 10 ನಿಮಿಷದೊಳಗೆ ದಾಖಲೆಪತ್ರಗಳನ್ನು ಒದಗಿಸುವಂತೆ ಪೊಲೀಸರು ಸೂಚಿಸಿದ್ದಾರೆ. ನಾನು ಸಾರಿಗೆ ನಿಯಮ ಮೀರಿಲ್ಲ. ಹೆಲ್ಮೆಟ್ ಧರಿಸದಿರುವುದು ನನ್ನ ತಪ್ಪು ಎಂದು ಮದನ್ ಹೇಳಿದ್ದಾನೆ.

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ 1000 ರೂ. ದಂಡ ತೆರುವಂತೆ ಸೂಚಿಸಿದ್ದೇವೆ. ಪರಿಶೀಲಿಸಿದಾಗ ಅವರಲ್ಲಿ ಯಾವುದೇ ದಾಖಲೆ ಪತ್ರಗಳಿರಲಿಲ್ಲ. ಆದ್ದರಿಂದ 23000 ರೂ. ದಂಡ ವಿಧಿಸಿದ ಚಲನ್ ನೀಡಿದ್ದೇವೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News