×
Ad

ಆರ್ಥಿಕ ಬಿಕ್ಕಟ್ಟಿನ ಭೀತಿ: ಒಂದೇ ದಿನದಲ್ಲಿ ಹೂಡಿಕೆದಾರರ 2.50 ಲಕ್ಷ ಕೋಟಿ ರೂ. ಸಂಪತ್ತು ನಷ್ಟ

Update: 2019-09-03 22:00 IST

ಮುಂಬೈ,ಸೆ.3: ತೀವ್ರಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಅಮೆರಿಕ-ಚೀನಾ ನಡುವೆ ನಿಲ್ಲದ ವ್ಯಾಪಾರ ಸಮರ, ಡಾಲರ್‌ನೆದುರು ರೂಪಾಯಿ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿತ ಇವುಗಳಿಂದ ಕಂಗಾಲಾಗಿರುವ ಹೂಡಿಕೆದಾರರಿಂದ ಶೇರುಗಳ ಮಾರಾಟದ ಭರಾಟೆಯಿಂದಾಗಿ ಮಂಗಳವಾರ ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಕ್ತಪಾತವೇ ಸಂಭವಿಸಿದೆ.

ಬಾಂಬೆ ಶೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 770 ಅಂಶಗಳಷ್ಟು ಪತನಗೊಂಡು ಈ ವರ್ಷದ ಈವರೆಗಿನ ಬೃಹತ್ ಕುಸಿತವನ್ನು ದಾಖಲಿಸಿದ್ದರೆ,ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ಕೂಡ 225 ಅಂಶಗಳಷ್ಟು ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು ಒಂದೇ ದಿನದಲ್ಲಿ 2.50 ಲ.ಕೋ.ರೂ.ಗೂ ಅಧಿಕ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಆರ್ಥಿಕತೆಯ ಮಂದಗತಿ,ಜಿಡಿಪಿ ಆರು ವರ್ಷಗಳ ಕನಿಷ್ಠ ಶೇ.5ಕ್ಕೆ ಕುಸಿದಿರುವುದು,ವಾಹನಗಳ ಮಾರಾಟ ಕುಸಿತದಿಂದಾಗಿ ಆಟೊಮೊಬೈಲ್ ಕ್ಷೇತ್ರದಲ್ಲಿ ಸಂಕಷ್ಟ, ವಿದೇಶಿ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳಿಂದ ನಿಲ್ಲದ ಹೂಡಿಕೆ ಹಿಂದೆಗೆತ ಇತ್ಯಾದಿಗಳು ಶೇರು ಮಾರುಕಟ್ಟೆಯ ಪತನಕ್ಕೆ ಕಾರಣಗಳಾಗಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನದ ಮಧ್ಯಂತರ ವಹಿವಾಟಿನಲ್ಲಿ 867 ಅಂಶಗಳ ಕುಸಿತ ದಾಖಲಿಸಿದ್ದ ಸೆನ್ಸೆಕ್ಸ್ ಬಳಿಕ ಅದನ್ನು 769.88 ಅಂಶಗಳಿಗೆ ತಗ್ಗಿಸಿಕೊಂಡು 36,562.91ರಲ್ಲಿ ಮುಕ್ತಾಯಗೊಂಡಿದೆ. ನಿಫ್ಟಿ 10,797.90ಕ್ಕೆ ದಿನದಾಟವನ್ನು ಮುಗಿಸಿದೆ.

ಸೆನ್ಸೆಕ್ಸ್ ಶೇರುಗಳಾದ ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ವೇದಾಂತ, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟರ್ಸ್, ರಿಲಯನ್ಸ್ ಮತ್ತು ಒಎನ್‌ಜಿಸಿ ತೀವ್ರ ಹಿನ್ನಡೆಯನ್ನು ಕಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News