​ಎನ್‌ಆರ್‌ಸಿ ಗೊಂದಲ ಸರಿಪಡಿಸಲು ಅಸ್ಸಾಂ ಸಚಿವ ಕಾರ್ಯತಂತ್ರ

Update: 2019-09-04 04:25 GMT
ಬಿಸ್ವಾ ಶರ್ಮಾ

ಗುವಾಹತಿ: ಅಂತಿಮ ನ್ಯಾಷನಲ್ ರಿಜಿಸ್ಟ್ರಿ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ)ನಲ್ಲಿ ಆಗಿರುವ ಗೊಂದಲ ಸರಿಪಡಿಸಲು ಅಸ್ಸಾಂ ಹಣಕಾಸು ಸಚಿವ ಹಾಗೂ ಬಿಜೆಪಿ ಮುಖಂಡ ಹಿಮಾಂತ ಬಿಸ್ವಾ ಶರ್ಮಾ ಮೂರು ಹಂತಗಳ ಕಾರ್ಯತಂತ್ರ ಪ್ರಕಟಿಸಿದ್ದಾರೆ.

ಆ.31ರಂದು ಪ್ರಕಟವಾದ ಅಂತಿಮ ಎನ್‌ಆರ್‌ಸಿಯಲ್ಲಿ ಆಗಿರುವ ಗೊಂದಲಗಳನ್ನು ಕೊನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾವಿಸಿದಂತೆ ಎನ್‌ಆರ್‌ಸಿ ಸಿದ್ಧಪಡಿಸುವ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ನಾಗರಿಕರ ಗಣತಿ ಕೈಗೊಳ್ಳುವುದು ಇದರಲ್ಲಿ ಸೇರಿದೆ.

ಸ್ಥಳೀಯ ಸುದ್ದಿವಾಹಿನಿಗಳ ಜತೆ ಮಾತನಾಡಿದ ಸಚಿವರು, ಈ ಗುರಿ ಸಾಧನೆಗೆ ಮೂರು ಗವಾಕ್ಷಿಗಳಿವೆ. ಮೊದಲನೆಯದಾಗಿ ಅಂತಿಮ ಎನ್‌ಆರ್‌ಸಿ ಪಟ್ಟಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಬೇಕು. ನಾವು ತಕ್ಷಣ ಮತ್ತು ಸಂಘಟಿತರಾಗಿ ಕ್ರಿಯಾಶೀಲರಾದರೆ, ಮರುಪರಿಶೀಲನೆ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಬಹುದು" ಎಂದು ವಿವರಿಸಿದರು.

ಆದರೆ ಇದಕ್ಕೆ ಇರುವ ಸಮಸ್ಯೆಯೆಂದರೆ ಅಂತಿಮ ಎನ್‌ಆರ್‌ಸಿ ಫಲಿತಾಂಶದ ಬಗ್ಗೆ ಅಸಂತೋಷ ಹೊಂದಿರುವ ಎಲ್ಲ ಹಕ್ಕುದಾರರು ಒಂದೇ ವೇದಿಕೆಯಲ್ಲಿಲ್ಲ ಎಂದು ಸಚಿವರು ವಿಶ್ಲೇಷಿಸಿದರು.

ಈ ನಿಟ್ಟಿನಲ್ಲಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ಎಪಿಡಬ್ಲ್ಯು ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಹಂ ಬಿಟ್ಟು ಒಗ್ಗೂಡಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬೇಕು. ಪ್ರತ್ಯೇಕ ಅರ್ಜಿ ಸಲ್ಲಿಸಿದರೂ, ಮರು ಪರಿಶೀಲನೆಗೆ ಮನವಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಶರ್ಮಾ ಮಾಡಿರುವ ಎರಡನೇ ಪ್ರಸ್ತಾವವೆಂದರೆ ಕೇಂದ್ರ ಗೃಹ ಸಚಿವರು ಹೇಳಿದಂತೆ, ನಾಗರಿಕ ಕಾಯ್ದೆ ತಿದ್ದುಪಡಿಯ ಬಳಿಕ ಕೈಗೊಳ್ಳಲು ಉದ್ದೇಶಿಸಿರುವ ರಾಷ್ಟ್ರಮಟ್ಟದ ಎನ್‌ಆರ್‌ಸಿಯಲ್ಲಿ ಅಸ್ಸಾಂ ರಾಜ್ಯವನ್ನು ಕೂಡಾ ಸೇರಿಸುವುದು. ಏಕೆಂದರೆ ಪ್ರಸ್ತುತ ಎನ್‌ಆರ್‌ಸಿಯಲ್ಲಿ ಅರ್ಜಿ ಸಲ್ಲಿಸಲು 2015ರ ಗಡುವು ನೀಡಲಾಗಿತ್ತು. ಇದೀಗ ಹೊಸದಾಗಿ ಕೈಗೊಂಡರೆ 2019ರ ಗಡುವು ವಿಧಿಸಬಹುದಾಗಿದೆ ಎಂದು ವಿವರಿಸಿದರು.

ಮೂರನೇ ಕಾರ್ಯತಂತ್ರದಲ್ಲಿ ರಾಜ್ಯ ಸರ್ಕಾರದ ಕಾರ್ಯವ್ಯಾಪ್ತಿ ಸೇರುತ್ತದೆ. "ಶಂಕಿತ ವಿದೇಶಿಯರ ಪ್ರಕರಣವನ್ನು ನ್ಯಾಯಮಂಡಳಿಗಳಿಗೆ ಪರಾಮರ್ಶೆಗೆ ನೀಡಲು ರಾಜ್ಯದ ಗಡಿ ಪೊಲೀಸರಿಗೆ ಅಧಿಕಾರವಿದೆ. ಈ ಹಕ್ಕನ್ನು ಕಿತ್ತುಕೊಂಡಿಲ್ಲ. ಮುಖ್ಯಮಂತ್ರಿಗಳು ತಕ್ಷಣ ಗಡಿ ಪೊಲೀಸ್ ಪಡೆಯನ್ನು ಮತ್ತೆ ಚುರುಕುಗೊಳಿಸಬೇಕು" ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News