ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 18 ಮಂದಿ ಮೃತ್ಯು

Update: 2019-09-04 15:52 GMT

ಗುರುದಾಸ್‌ಪುರ, ಸೆ. 4: ಪಂಜಾಬ್‌ನ ಗುರುದಾಸ್‌ಪುರದ ಪಟಾಕಿ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬೃಹತ್ ಸ್ಫೋಟದಿಂದ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ಸ್ಫೋಟದಿಂದ ಕುಸಿದ ಕಟ್ಟಡದ ಅಡಿಯಲ್ಲಿ 12ಕ್ಕೂ ಅಧಿಕ ಮಂದಿ ಸಿಲುಕಿರುವ ಸಾಧ್ಯತೆ ಇದೆ.

ಗುರುದಾಸ್‌ಪುರ ಬಾಟ್ಲಾದ ವಸತಿ ಪ್ರದೇಶದಲ್ಲಿರುವ ಈ ಕಾರ್ಖಾನೆಯಲ್ಲಿ 4 ಗಂಟೆಗೆ ಸ್ಫೋಟ ಸಂಭವಿಸಿತು ಎಂದು ಎಂದು ಐಜಿ (ಗಡಿ ವಲಯ) ಎಸ್‌ಪಿಎಸ್ ಪರ್ಮಾರ್ ತಿಳಿಸಿದ್ದಾರೆ.

ಈ ಸ್ಫೋಟದ ತೀವ್ರತೆಗೆ ಕಟ್ಟಡ ಸಂಪೂರ್ಣ ನಾಶಗೊಂಡಿದೆ. ಸಮೀಪದ ಕಟ್ಟಡಗಳಿಗೂ ಹಾನಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕ ಘಟನಾ ಸ್ಥಳ ತಲುಪಿದ್ದಾರೆ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.

‘‘ಬಾಟ್ಲಾದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಿಂದ ಹಲವರು ಜೀವ ಕಳೆದುಕೊಂಡ ವಿಷಯ ಕೇಳಿ ದುಃಖವಾಯಿತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿ ದ್ದಾರೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಘಟನೆ ಬಗ್ಗೆ ಗುರುದಾಸ್‌ಪುರದ ಸಂಸದ ಸನ್ನಿ ಡಿಯೋಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ಬಾಟ್ಲಾ ಕಾರ್ಖಾನೆ ಸ್ಫೋಟದ ಸುದ್ದಿ ತಿಳಿದು ನೋವುಂಟಾಯಿತು. ಎನ್‌ಡಿಆರ್‌ಎಫ್ ತಂಡಗಳು ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಿಗಿದ್ದಾರೆ’’ ಎಂದು ಡಿಯೋಲ್ ಟ್ವೀಟ್ ಮಾಡಿದ್ದಾರೆ.

ಎನ್‌ಡಿಆರ್‌ಎಫ್ ಹಾಗೂ ಎಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಹಿರಿಯ ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಸ್ಥಳದಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News