ಹಡಗುಕಟ್ಟೆಗೆ ಹಡಗಿನಲ್ಲಿ ಪುಟಿನ್, ಮೋದಿ ಜಂಟಿ ಯಾನ 2 ದಿನಗಳ ಪ್ರವಾಸಕ್ಕಾಗಿ ರಶ್ಯದಲ್ಲಿ ಪ್ರಧಾನಿ

Update: 2019-09-04 14:59 GMT

ವ್ಲಾಡಿವೊಸ್ಟೊಕ್ (ರಶ್ಯ), ಸೆ. 4: ಎರಡು ದಿನಗಳ ರಶ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹಡಗೊಂದರಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಝ್ವೇಝ್ಡ ಹಡಗುಕಟ್ಟೆ ಆವರಣಕ್ಕೆ ಪ್ರಯಾಣಿಸಿದರು.

ತನ್ನ ಭೇಟಿಯ ವೇಳೆ ಪ್ರಧಾನಿ ಮೋದಿ, ರಶ್ಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸುವುದು ಮಾತ್ರವಲ್ಲದೆ, ಈಸ್ಟರ್ನ್ ಎಕನಾಮಿಕ್ ಫೋರಂನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ರಶ್ಯದ ಫಾರ್ ಈಸ್ಟ್ ಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯ ಮೊದಲ ತಂಗುದಾಣ ಇದಾಗಿದೆ.

‘‘ಭಾರತ-ರಶ್ಯ ಬಾಂಧವ್ಯಕ್ಕೆ ಪ್ರಬಲ ಗಾಳಿ ಬೆಂಬಲವಾಗಿದೆ! ಪ್ರಧಾನಿ ನರೇಂದ್ರ ಮೋದಿ ಮತ್ತು ರಶ್ಯ ಅಧ್ಯಕ್ಷ ಪುಟಿನ್, ಝ್ವೇಝ್ಡ ಹಡಗುಕಟ್ಟೆ ಆವರಣಕ್ಕೆ ಪ್ರಯಾಣಿಸುವ ದಾರಿಯಲ್ಲಿ ಉತ್ತಮ ಸಮಯವನ್ನು ಜೊತೆಯಾಗಿ ಕಳೆಯುತ್ತಿದ್ದಾರೆ’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಬೆಳಗ್ಗೆ ವ್ಲಾಡಿವೊಸ್ಟೊಕ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ, ಪ್ರಧಾನಿ ಮೋದಿ ಪುಟಿನ್‌ರನ್ನು ಭೇಟಿಯಾದರು ಹಾಗೂ ಬಳಿಕ ಜೊತೆಯಾಗಿ ಝ್ವೇಝ್ಡ ಹಡಗುಕಟ್ಟೆ ಆವರಣಕ್ಕೆ ಪ್ರಯಾಣಿಸಿದರು.

ಈ ಸಂದರ್ಭದಲ್ಲಿ, ಹಡಗು ನಿರ್ಮಾಣ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎನ್ನಲಾಗಿದೆ.

‘‘ರಶ್ಯ ಅಧ್ಯಕ್ಷರ ಔದಾರ್ಯದಿಂದ ನನ್ನ ಹೃದಯ ತುಂಬಿ ಬಂದಿದೆ’’ ಎಂದು ಹಡಗು ಪ್ರಯಾಣದ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದರು.

‘‘ಝ್ವೇಝ್ಡ ಹಡಗು ಕಟ್ಟೆ ಆವರಣಕ್ಕೆ ನನ್ನೊಂದಿಗೆ ಭೇಟಿ ನೀಡಲು ಅಧ್ಯಕ್ಷ ಪುಟಿನ್ ತೆಗೆದುಕೊಂಡ ನಿರ್ಧಾರದಿಂದ ನನ್ನ ಹೃದಯ ತುಂಬಿ ಬಂದಿದೆ’’ ಎಂದು ಮೋದಿ ಹೇಳಿದ್ದಾರೆ.

‘‘ನಮ್ಮ ಭೇಟಿಯ ವೇಳೆ, ಹಡಗುಕಟ್ಟೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಧ್ಯಕ್ಷ ಪುಟಿನ್ ನನಗೆ ತೋರಿಸಿದರು. ನನ್ನ ಭೇಟಿಯಿಂದಾಗಿ ಈ ಮಹತ್ವದ ಕ್ಷೇತ್ರದಲ್ಲಿ ಸಹಕಾರದ ಹೊಸ ದಾರಿಗಳು ತೆರೆದುಕೊಳ್ಳಲಿವೆ’’ ಎಂದು ಮೋದಿ ಇನ್ನೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

► ಮಹಾತ್ಮಾ ಗಾಂಧೀಜಿಯ ಅಂಚೆ ಚೀಟಿ ಬಿಡುಗಡೆಗೆ ರಶ್ಯ ನಿರ್ಧಾರ

ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ ರಶ್ಯವು ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಲಿದೆ ಎಂದು ರಶ್ಯಕ್ಕೆ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮ ರಶ್ಯದ ವ್ಲಾಡಿವೊಸ್ಟೊಕ್‌ನಲ್ಲಿ ಬುಧವಾರ ಹೇಳಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಶೃಂಗ ಸಮ್ಮೇಳನ ಮಟ್ಟದ ಮತುಕತೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರ್ಮ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ರಶ್ಯ ನೀಡಿರುವ ಗೌರವಕ್ಕಾಗಿ ಭಾರತ ಆ ದೇಶಕ್ಕೆ ಆಭಾರಿಯಾಗಿದೆ ಎಂದರು.

‘‘ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ ವಿಶೇಷ ಸ್ಮಾರಕ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ರಶ್ಯ ಸರಕಾರ ತೆಗೆದುಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News