ಬಾಬರಿ ಮಸೀದಿ ವಿವಾದ ಕಕ್ಷಿಗಾರ ಇಕ್ಬಾಲ್ ಅನ್ಸಾರಿಗೆ ಹಲ್ಲೆ
ಅಯೋಧ್ಯೆ, ಸೆ. 4: ಬಾಬರಿ ಮಸೀದಿ ವಿವಾದ ಪ್ರಕರಣದ ಮುಖ್ಯ ಕಕ್ಷಿಗಾರ ಇಕ್ಬಾಲ್ ಅನ್ಸಾರಿ ಅವರಿಗೆ ಅವರ ಮನೆಯಲ್ಲಿ ಇಬ್ಬರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪ್ರಕರಣವನ್ನು ಹಿಂದೆ ತೆಗೆದುಕೊಳ್ಳುವಂತೆ, ಇಲ್ಲದೇ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಈ ಸಂದರ್ಭ ಇಕ್ಬಾಲ್ ಅನ್ಸಾರಿ ಅವರ ಭದ್ರತಾ ಸಿಬ್ಬಂದಿಗಳು ಮಧ್ಯೆ ಪ್ರವೇಶಿಸಿದರು ಹಾಗೂ ಅವರನ್ನು ರಕ್ಷಿಸಿದರು. ಅನಂತರ ದಾಳಿಕೋರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
‘‘ಇಬ್ಬರಲ್ಲಿ ಓರ್ವ ಮಹಿಳೆ ತಾನು ವರ್ತಿಕಾ ಸಿಂಗ್ ಎಂದು ಪರಿಚಯಿಸಿಕೊಂಡರು. ಅಲ್ಲದೆ ತಾನು ಶಾರ್ಪ್ ಶೂಟರ್ ಎಂದು ಹೇಳಿದ್ದಳು. ವಿವಾದದಿಂದ ತನ್ನ ಪ್ರಕರಣವನ್ನು ಹಿಂದೆ ತೆಗೆಯುವಂತೆ ಒತ್ತಾಯ ಹೇರಿದ್ದರು. ಇಲ್ಲದೇ ಇದ್ದರೆ ಗುಂಡು ಹಾರಿಸಿ ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿದ್ದರು’’ ಎಂದು ಅನ್ಸಾರಿ ತಿಳಿಸಿದ್ದಾರೆ.
‘‘ಅನಂತರ ಅವರು ನನ್ನ ಮೇಲೆ ದಾಳಿ ನಡೆಸಿದರು. ಆದರೆ, ಭದ್ರತಾ ಸಿಬ್ಬಂದಿ ನನ್ನನ್ನು ರಕ್ಷಿಸಿದರು. ಈ ದಾಳಿಯಲ್ಲಿ ನನಗೆ ಯಾವುದೇ ಗಾಯಗಳಾಗಿಲ್ಲ’’ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫೈಝಾಬಾದ್‌ನ ಪೊಲೀಸ್ ಅಧೀಕ್ಷಕ (ನಗರ) ‘‘ನಾವು ಅವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ’’ ಎಂದರು. ‘‘ಯಾವಾಗ ಎಫ್‌ಐಆರ್ ದಾಖಲಿಸುತ್ತೀರಿ’’ ಎಂದು ಪ್ರಶ್ನಿಸಿದಾಗ, ‘‘ನಾನು ನಿಮಗೆ ತಿಳಿಸುತ್ತೇನೆ’’ ಎಂದರು.
ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದಲ್ಲಿ ಸುನ್ನಿ ವಕ್ಫ್ ಮಂಡಳಿ ಹಾಗೂ ಮುಸ್ಲಿಂ ಕಕ್ಷಿಗಾರರ ಪರವಾಗಿ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರಿಗೆ ಇಬ್ಬರು ವ್ಯಕ್ತಿಗಳು ಬೆದರಿಕೆ ಒಡ್ಡಿದ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿತ್ತು.