ಅರುಣಾಚಲಪ್ರದೇಶದಲ್ಲಿ ಚೀನಾ ಸೇನೆ ಅತಿಕ್ರಮಣ ನಡೆಸಿಲ್ಲ: ಬಿಜೆಪಿ ಸಂಸದನ ಆರೋಪಕ್ಕೆ ಸೇನೆಯ ಪ್ರತ್ಯುತ್ತರ
ಹೊಸದಿಲ್ಲಿ, ಎ. 4: ಚೀನಾ ಸೇನೆ ಅರುಣಾಚಲಪ್ರದೇಶದ ಅಂಜಾವ್ ಜಿಲ್ಲೆಯ ಒಳ ನುಸುಳಿದೆ ಹಾಗೂ ಅಲ್ಲಿನ ತೊರೆಯೊಂದಕ್ಕೆ ಸೇತುವೆ ನಿರ್ಮಿಸಿದೆ ಎಂಬ ಅರುಣಾಚಲದ ಬಿಜೆಪಿ ಸಂಸದನ ಪ್ರತಿಪಾದನೆಯನ್ನು ಭಾರತೀಯ ಸೇನೆ ಬುಧವಾರ ಅಧಿಕೃತ ಹೇಳಿಕೆ ಮೂಲಕ ನಿರಾಕರಿಸಿದೆ.
ಹೇಳಿಕೆಯಲ್ಲಿ ಸೇನೆ, ‘‘ಅಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ. ಕೆಲವು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ ವರದಿಯಾದ ಪ್ರದೇಶ ಫಿಶ್ ಟೈಲ್. ಇತರ ಹಲವು ಪ್ರದೇಶಗಳಂತೆ ಇಲ್ಲಿನ ಗಡಿ ನಿಯಂತ್ರಣ ರೇಖೆಯ ಸಂಧಿಸುವ ಸ್ಥಳದ ಬಗ್ಗೆ ವಿಭಿನ್ನ ಗ್ರಹಿಕೆ ಇದೆ.’’ ಎಂದಿದೆ.
ಚೀನಾ ಸೇನೆ ಕಳೆದ ತಿಂಗಳು ಭಾರತದ ಭೂಭಾಗದ ಅತಿಕ್ರಮಣ ನಡೆಸಿದೆ ಹಾಗೂ ಚಗ್ಲಾಗಾಂವ್ ಸರ್ಕಲ್‌ನ ಕಿಯೋಮ್ರು ನುಲ್ಲಾಹ್‌ನಲ್ಲಿ ಸೇತುವೆ ನಿರ್ಮಿಸಿದೆ. ಈ ಸೇತುವೆಯನ್ನು ಸ್ಥಳೀಯ ಕೆಲವು ಯುವಕರು ಮಂಗಳವಾರ ಗಮನಿಸಿದ್ದಾರೆ. ಈ ಪ್ರದೇಶ ಚಗ್ಲಾಗಾಂವ್‌ನಿಂದ ಸರಿಸುಮಾರು 25 ಕಿ.ಮೀ. ಈಶಾನ್ಯದಲ್ಲಿದೆ ಹಾಗೂ ಭಾರತೀಯ ಭೂಭಾಗದ ಒಳಗೆ ಇದೆ ಎಂದು ಎಂದು ಬಿಜೆಪಿ ಸಂಸದ ತಾಪಿರ್ ಗಾವೋ ಹೇಳಿದ್ದರು.
ಆದರೆ, ‘‘ಈ ಭೂಪ್ರದೇಶ ದಟ್ಟ ಹಸಿರಿನಿಂದ ತುಂಬಿದೆ. ನಾಲೆ ಹಾಗೂ ತೊರೆಯ ಬದಿಯಲ್ಲಿ ನಡಿಗೆಯ ಮೂಲಕವೇ ಸಂಚರಿಸಬೇಕು. ಮಳೆಗಾಲದಲ್ಲಿ ನಾಲೆಗಳಲ್ಲಿ ನೀರು ಹರಿಯಲು ಆರಂಭವಾಗುತ್ತದೆ. ಆದುದರಿಂದ ಗಸ್ತು ಪಡೆ ಸಂಚರಿಸಲು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುತ್ತದೆ ಎಂದು ಸೇನೆ ಹೇಳಿದೆ.
ಈ ಪ್ರದೇಶದಲ್ಲಿ ಚೀನಾ ಯೋಧರಾಗಲಿ ಅಥವಾ ನಾಗರಿಕರಾಗಲಿ ಖಾಯಂ ಆಗಿ ಕಂಡು ಬಂದಿಲ್ಲ. ನಮ್ಮ ಸೇನಾ ಪಡೆ ಕಣ್ಗಾವಲು ನಡೆಸುತ್ತಿದೆ ಎಂದು ಸೇನೆ ಪುನರುಚ್ಚರಿಸಿದೆ.