ಸೆರೆನಾ ವಿಲಿಯಮ್ಸ್ಗೆ 100ನೇ ಜಯ
ನ್ಯೂಯಾರ್ಕ್, ಸೆ.4: ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯು.ಎಸ್. ಓಪನ್‌ನಲ್ಲಿ 100ನೇ ಗೆಲುವು ದಾಖಲಿಸಿ ಗಮನ ಸೆಳೆದಿದ್ದಾರೆ.
ಇಲ್ಲಿ ಮಂಗಳವಾರ 44 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಆರು ಬಾರಿಯ ಯುಎಸ್ ಓಪನ್ ಚಾಂಪಿಯನ್ ಸೆರೆನಾ ಚೀನಾದ 18ನೇ ಶ್ರೇಯಾಂಕದ ವಾಂಗ್ ಖ್ವಿಯಾಂಗ್‌ರನ್ನು 6-1, 6-0 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು.
ದಾಖಲೆಯ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿ ಮಾರ್ಗರೆಟ್ ಕೋರ್ಟ್ ದಾಖಲೆ ಸರಿಗಟ್ಟುವತ್ತ ಚಿತ್ತವಿರಿಸಿರುವ ಸೆರೆನಾ ಅಂತಿಮ-4ರ ಸುತ್ತಿನಲ್ಲಿ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ವಿರುದ್ಧ ಆಡಿರುವ ಕಳೆದ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೆರೆನಾ ಜಯ ಸಾಧಿಸಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ ಜೋಹನ್ನಾ ಕಾಂಟಾ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸಿದ ಸ್ವಿಟೋಲಿನಾ 6-4, 6-4 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಮೊದಲ ಬಾರಿ ಯು.ಎಸ್. ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ ಉಕ್ರೇನ್‌ನ ಮೊದಲ ಆಟಗಾರ್ತಿ ಎನಿಸಿಕೊಂಡರು.
ಕಾಂಟಾ ವಿರುದ್ಧ ಈತನಕ ಆಡಿರುವ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿರುವ ಐದನೇ ಶ್ರೇಯಾಂಕದ ಸ್ವಿಟೋಲಿನಾ ಸತತ ಎರಡನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ್ದಾರೆ. ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿದ್ದರು.
ಇದುನನಗೆ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಇಲ್ಲಿ ಮೊದಲ ಪಂದ್ಯ ಆಡಿದಾಗ ಬಹುಶಃ ನನಗೆ ಆಗ 16ನೇ ವಯಸ್ಸು. ಇದೀಗ 100ನೇ ಪಂದ್ಯ ಆಡಿದ್ದೇನೆ. ನಾನು ಇಷ್ಟೊಂದು ಪಂದ್ಯ ಆಡುವ ನಂಬಿಕೆ ಇರಲಿಲ್ಲ’’ ಸೆರೆನಾ ವಿಲಿಯಮ್ಸ್