×
Ad

ಇಂಡಿಯಾ ರೆಡ್ ಆರಂಭಿಕ ಮೇಲುಗೈ

Update: 2019-09-04 22:57 IST

 ► ಇಂಡಿಯಾ ಗ್ರೀನ್ 147/8

ಬೆಂಗಳೂರು, ಸೆ.4: ದುಲೀಪ್ ಟ್ರೋಫಿ ಫೈನಲ್‌ನ ಮೊದಲ ದಿನವಾದ ಬುಧವಾರ ಎಡಗೈ ವೇಗದ ಬೌಲರ್ ಜೈದೇವ್ ಉನದ್ಕಟ್ (4-58)ಉತ್ತಮ ಬೌಲಿಂಗ್ ನೆರವಿನಿಂದ ಇಂಡಿಯಾ ರೆಡ್ ತಂಡ ಇಂಡಿಯಾ ಗ್ರೀನ್ ವಿರುದ್ಧ ಆರಂಭಿಕ ಮೇಲುಗೈ ಪಡೆದಿದೆ.

ಮಳೆಬಾಧಿತ ಮೊದಲ ದಿನದಾಟದಂತ್ಯಕ್ಕೆ ಇಂಡಿಯಾ ಗ್ರೀನ್ 147 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಇಂಡಿಯಾ ಗ್ರೀನ್ ನಾಯಕ ಫೈಝ್ ಫಝಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕರಾರುವಾಕ್ ಬೌಲಿಂಗ್ ಮಾಡಿದ ಜೈದೇವ್, ಇಂಡಿಯಾ ಗ್ರೀನ್ ತಂಡದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡರು. 8ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಯಾಂಕ್ ಮಾರ್ಕಂಡೆ ಔಟಾಗದೆ 32 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಅಕ್ಷತ್ ರೆಡ್ಡಿ ಜೊತೆ ಇನಿಂಗ್ಸ್ ಆರಂಭಿಸಿದ ಫಝಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 19 ರನ್ ಗಳಿಸುವಷ್ಟರಲ್ಲಿ 16 ರನ್‌ಗೆ ಉನದ್ಕಟ್‌ಗೆ ವಿಕೆಟ್ ಒಪ್ಪಿಸಿದರು. ರೆಡ್ಡಿ(16)ಹಾಗೂ ದಿಲ್ಲಿ ಬ್ಯಾಟ್ಸ್‌ಮನ್ ಧುೃವ್ ಶೋರೆ(23)34 ರನ್ ಸೇರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, 12 ರನ್ ಗಳಿಸುವಷ್ಟರಲ್ಲಿ ಶೋರೆ, ಸಿದ್ದೇಶ್ ಲಾಡ್ ಹಾಗೂ ರೆಡ್ಡಿ ವಿಕೆಟ್‌ಗಳನ್ನು ಕಳೆದುಕೊಂಡ ಇಂಡಿಯಾ ಗ್ರೀನ್ ದಿಢೀರ್ ಕುಸಿತ ಕಂಡಿತು.

ಶೋರೆ ಅವರು ಸಂದೀಪ್ ವಾರಿಯರ್(1-25)ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರು. ಲಾಡ್ ಅವರು ಉನದ್ಕಟ್‌ಗೆ ವಿಕೆಟ್ ಒಪ್ಪಿಸಿದರು. ತಾಳ್ಮೆಯ ಇನಿಂಗ್ಸ್ ಆಡಿದ ರೆಡ್ಡಿ ರನೌಟಾದರು.

27 ರನ್ ಜೊತೆಯಾಟ ನಡೆಸಿದ ಆಕಾಶ್‌ದೀಪ್‌ನಾಥ್(29)ಹಾಗೂ ಅಕ್ಷಯ್ ವಾಡ್ಕರ್(6)ತಂಡವನ್ನು ಆಧರಿಸಲು ಯತ್ನಿಸಿದರು. ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ ಈ ಜೋಡಿಯನ್ನು ಬೇರ್ಪಡಿಸಿದರು. ವಾಡ್ಕರ್ ಹಾಗೂ ಆಲ್‌ರೌಂಡರ್ ಧಮೇಂದ್ರ ಸಿನ್ಹಾ ಜಡೇಜ ವಿಕೆಟನ್ನು ಕಳೆದುಕೊಂಡ ಇಂಡಿಯಾ ಗ್ರೀನ್ ಮತ್ತಷ್ಟು ಕುಸಿತ ಕಂಡಿತು. ರಾಜೇಶ್ ಮೊಹಾಂತಿ(0)ವಿಕೆಟನ್ನು ಉರುಳಿಸಿದ ಉನದ್ಕಟ್ ನಾಲ್ಕನೇ ಬಲಿ ಪಡೆದರು.

9ನೇ ವಿಕೆಟ್ ಜೊತೆಯಾಟದಲ್ಲಿ ತನ್ವೀರ್‌ವುಲ್ ಹಕ್(ಔಟಾಗದೆ 8) ಅವರೊಂದಿಗೆ 35 ರನ್ ಸೇರಿಸಿದ ಮರ್ಕಂಡೆ ಗ್ರೀನ್ ತಂಡದ ಕುಸಿತಕ್ಕೆ ತಡೆಯಾದರು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಗ್ರೀನ್ ತಂಡ 43 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಿತ್ತು. ಸ್ವಲ್ಪ ಸಮಯದ ಬಳಿಕ ಪಂದ್ಯ ಪುನರಾರಂಭವಾಯಿತು. ಆದರೆ, ಮಂದ ಬೆಳಕಿನಿಂ ದಾಗಿ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News