ನ್ಯೂಝಿಲ್ಯಾಂಡ್ಗೆ ರೋಚಕ ಜಯ, ಸರಣಿ ಕೈವಶ

Update: 2019-09-04 17:35 GMT

► ಎರಡನೇ ಟ್ವೆಂಟಿ-20

ಕ್ಯಾಂಡಿ(ಶ್ರೀಲಂಕಾ), ಸೆ.4: ಕಾಲಿನ್ ಡಿ ಗ್ರಾಂಡ್‌ಹೋಮ್(59) ಹಾಗೂ ಟಾಮ್ ಬ್ರೂಸ್(53)ಅರ್ಧಶತಕಗಳ ಕೊಡುಗೆ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 162 ರನ್ ಗುರಿ ಬೆನ್ನಟ್ಟಿದ ಕಿವೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಅಖಿಲ ಧನಂಜಯ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕಿವೀಸ್ ಆರಂಭಿಕ ಆಟಗಾರ ಕಾಲಿನ್ ಮುನ್ರೊ(13)ವಿಕೆಟನ್ನು ಉರುಳಿಸಿದರು. ಆ ನಂತರ ಟಿಮ್ ಸೆಫೆರ್ಟ್(15) ಹಾಗೂ ಸ್ಕಾಟ್ ಕುಗ್ಲೆಜಿನ್(8)ರನ್ನು ಪೆವಿಲಿಯನ್‌ಗೆ ಅಟ್ಟಿದ ಧನಂಜಯ ಕಿವೀಸ್ 4ನೇ ಓವರ್‌ನಲ್ಲಿ 38 ರನ್‌ಗೆ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.

 ಡಿ ಗ್ರಾಂಡ್‌ಹೋಮ್ ಹಾಗೂ ಬ್ರೂಸ್ ಮಧ್ಯಮ ಸರದಿಯಲ್ಲಿ ತಂಡಕ್ಕೆ ಆಸರೆಯಾದರು. ಈ ಇಬ್ಬರು 4ನೇ ವಿಕೆಟ್ ಜೊತೆಯಾಟದಲ್ಲಿ 109 ರನ್ ಸೇರಿಸಿದರು. ಕಿವೀಸ್‌ಗೆ 11 ಎಸೆತಗಳಲ್ಲಿ 15 ರನ್ ಅಗತ್ಯವಿದ್ದಾಗ ಗ್ರಾಂಡ್‌ಹೋಮ್ ವಿಕೆಟ್ ಒಪ್ಪಿಸಿದರು. ಆಗ ಶ್ರೀಲಂಕಾದ ಗೆಲುವಿನ ಆಸೆ ಚಿಗುರೊಡೆದಿತ್ತು.

ಕೊನೆಯ ಓವರ್‌ನಲ್ಲಿ ನ್ಯೂಝಿಲ್ಯಾಂಡ್‌ಗೆ 7 ರನ್ ಅಗತ್ಯವಿದ್ದಾಗ ಬ್ರೂಸ್(53) ಹಾಗೂ ಡರಿಲ್ ಮಿಚೆಲ್(1)ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಅಂತಿಮ ಓವರ್‌ನ ಮೂರನೇ ಎಸೆತದಲ್ಲಿ ಸ್ಯಾಂಟ್ನರ್(ಔಟಾಗದೆ 10) ನೀಡಿದ ಕ್ಯಾಚ್ ಪಡೆಯುವ ಯತ್ನದಲ್ಲಿ ಜಯಸೂರ್ಯ ಹಾಗೂ ಕುಸಾಲ್ ಮೆಂಡಿಸ್ ಪರಸ್ಪರ ಡಿಕ್ಕಿಯಾದರು. ಜಯಸೂರ್ಯ ಕ್ಯಾಚ್ ಪಡೆದಿದ್ದರೂ ಅವರ ಕಾಲು ಬೌಂಡರಿ ಗೆರೆಗೆ ಸ್ಪರ್ಶಿಸಿದ್ದ ಕಾರಣ ನ್ಯೂಝಿಲ್ಯಾಂಡ್‌ಗೆ ಅಂಪೈರ್ ಆರು ರನ್ ನೀಡಿದರು.

ಅಂತಿಮವಾಗಿ ನ್ಯೂಝಿಲ್ಯಾಂಡ್ ಇನ್ನೂ 2 ಎಸೆತ ಬಾಕಿ ಇರುವಾಗಲೇ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.

ಶ್ರೀಲಂಕಾ 161/9: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಮೊದಲ ವಿಕೆಟ್ ಜೊತೆಯಾಟದಲ್ಲಿ 34 ರನ್ ಸೇರಿಸಿದ ಆರಂಭಿಕ ಆಟಗಾರರಾದ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೇರ ಶ್ರೀಲಂಕಾಕ್ಕೆ ಸಾಧಾರಣ ಆರಂಭ ನೀಡಿದರು. ನಿರೊಶನ್ ಡಿಕ್ವೆಲ್ಲಾ ಹಾಗೂ ಅವಿಷ್ಕಾ ಫೆರ್ನಾಂಡೊ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ 3ನೇ ವಿಕೆಟ್‌ನಲ್ಲಿ 68 ರನ್ ಜೊತೆಯಾಟ ನಡೆಸಿದರು. ಕಿವೀಸ್ ನಾಯಕ ಟಿಮ್ ಸೌಥಿ ಅವರು ಫೆರ್ನಾಂಡೊ(37) ವಿಕೆಟನ್ನು ಪಡೆದು ಈ ಜೋಡಿಯನ್ನು ಬೇರ್ಪಡಿಸಿದರು. 18 ರನ್‌ಗೆ 2 ವಿಕೆಟ್ ಪಡೆದ ಸೌಥಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

 ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಸೆ.6ರಂದು 3ನೇ ಹಾಗೂ ಅಂತಿಮ ಟಿ-20 ಪಂದ್ಯವನ್ನು ಆಡಲಿವೆ.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲ್ಯಾಂಡ್: 165/6(ಗ್ರಾಂಡ್‌ಹೋಮ್ 59, ಟಾಮ್ ಬ್ರೂಸ್ 53, ಅಖಿಲ ಧನಂಜಯ 3-36)

ಶ್ರೀಲಂಕಾ: 161/9(ಡಿಕ್ವೆಲ್ಲಾ 39, ಅವಿಷ್ಕಾ ಫೆರ್ನಾಂಡೊ 37, ರ್ಯಾನ್ಸ್ 3-33, ಸೌಥಿ 2-18, ಕುಗ್ಲೆಜಿನ್ 2-38)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News