×
Ad

ಆಯ್ಕೆಗಾರರ ಜತೆಗೆ ವಾಗ್ವಾದ ಹುದ್ದೆ ಕಳೆದುಕೊಂಡ ಬಂಗಾರ್

Update: 2019-09-04 23:11 IST

ಮುಂಬೈ, ಸೆ.4: ಆಯ್ಕೆಗಾರರ ಜತೆ ವಾಗ್ವಾದ ನಡೆಸಿದ ತಪ್ಪಿಗೆ ಸಂಜಯ್ ಬಂಗಾರ್ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಹುದ್ದೆ ಕಳೆದುಕೊಂಡಿ ದ್ದಾರೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

 ಮುಂಬರುವ ತವರು ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಬ್ಯಾಟಿಂಗ್ ಕೋಚ್ ನೇಮಕವಾಗಿದೆ. ಈ ಹಿಂದೆ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಜಾಗಕ್ಕೆ ವಿಕ್ರಮ್ ಠಾಥೋಡ್ ನೇಮಕಗೊಂಡಿದ್ದಾರೆ.

  

 ಪ್ರಧಾನ ಕೋಚ್, ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಕೋಚ್ ಅವಧಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿ ತನಕ ವಿಸ್ತರಣೆಯಾಗಿತ್ತು. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಪ್ರಧಾನ ಕೋಚ್ ಆಗಿ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಆಗಿ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆಗಿ ಆರ್.ಶ್ರೀಧರ್ ಪುನರಾಯ್ಕೆಗೊಂಡಿದ್ದರು. ಆದರೆ ಬ್ಯಾಟಿಂಗ್ ಕೋಚ್ ಮಾತ್ರ ಬದಲಾವ ಣೆಯಾಗಿತ್ತು. ಸಂಜಯ್ ಬಂಗಾರ್ ಬ್ಯಾಟಿಂಗ್ ಹುದ್ದೆ ಕಳೆದುಕೊಂಡ ಕಾರಣ ಮಾತ್ರ ಈ ವರೆಗೂ ನಿಗೂಢವಾಗಿತ್ತು. ಪ್ರಧಾನ ಕೋಚ್ ಆಯ್ಕೆಯನ್ನು ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಸಮಿತಿ ನಡೆಸಿತ್ತು. ಆದರೆ ಸಹಾಯಕ ಕೋಚ್‌ಗಳ ಆಯ್ಕೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಆಯ್ಕೆ ಸಮಿತಿಗೆ ಬಿಸಿಸಿಐ ವಹಿಸಿಕೊಟ್ಟಿತ್ತು.

     ಭಾರತ ತಂಡದ ಮಧ್ಯಮ ಸರದಿಯ ವೈಫಲ್ಯವನ್ನು ಸರಿಪಡಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ ಕಳೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಆಯ್ಕೆ ಸಮಿತಿ ಬಂಗಾರ್ ಒಪ್ಪಂದವನ್ನು ಮುಂದುವರಿಸದಿರುವ ಬಗ್ಗೆ ಚಿಂತನೆ ನಡೆಸಿತ್ತು. ಈ ವಿಚಾರವನ್ನು ಅರಿತು ಕೊಂಡಿದ್ದ ಸಂಜಯ್ ಬಂಗಾರ್ ಅವರು ಸಂಜೆ ಹೊತ್ತಿಗೆ ಕೋಚ್‌ಗಳ ಸಂದರ್ಶನ ನಡೆಸುತ್ತಿದ್ದ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಕೊಠಡಿಯ ಬಾಗಿಲನ್ನು ಬಡಿದು ಒಳನುಗ್ಗಿ ಅವರಲ್ಲಿ ವಾಗ್ವಾದ ನಡೆಸಿದ್ದರು. ಬ್ಯಾಟಿಂಗ್ ಕೋಚ್ ಹುದ್ದೆಯಿಂದ ತನ್ನನ್ನು ಬದಲಾಯಿಸುವುದರ ವಿರುದ್ಧ ಎಚ್ಚರಿಕೆ ನೀಡಿ ಬಂಗಾರ್ ಹೊರ ಬಂದಿದ್ದರು ಎನ್ನಲಾಗಿದೆ.    ಬಂಗಾರ್ ಅಶಿಸ್ತಿನ ವರ್ತನೆಗಾಗಿ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ಕಳೆದುಕೊಂಡಿದ್ದರು ಎಂದು ವರದಿ ತಿಳಿಸಿದೆ. ಬಂಗಾರ್ ನಡವಳಿಕೆ ಸರಿ ಇರಲಿಲ್ಲ. ಈ ಹಿಂದೆಯೂ ಅವರ ವಿರುದ್ಧ ಹಲವು ಬಾರಿ ಬಿಸಿಸಿಐ ಆಡಳಿತಗಾರರ ಸಮಿತಿಗೆ ದೂರು ರವಾನೆಯಾಗಿತ್ತು. ಈ ಕಾರಣದಿಂದಾಗಿ ಬಂಗಾರ್ ಬದಲಾವಣೆಗೆ ಬಿಸಿಸಿಐ ನಿರ್ಧಾರ ಕೈಗೊಂಡಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News