ಪಂಜಾಬ್ ನ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ: ಸಾವಿನ ಸಂಖ್ಯೆ 27ಕ್ಕೆ ಏರಿಕೆ

Update: 2019-09-05 05:22 GMT

ಚಂಡೀಗಢ, ಸೆ.5: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಬಟಲಾ ಪಟ್ಟಣದ ವಸತಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪ್ಟವರ ಸಂಖ್ಯೆ23ಕ್ಕೇರಿದೆ. ಈ ಘಟನೆಯಲ್ಲಿ    27 ಮಂದಿ ಗಾಯಗೊಂಡಿದ್ದಾರೆ. 

ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಕಟ್ಟಡದೊಳಗೆ ಇನ್ನು ಹಲವು ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಸಮಾಧ್ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಅಪರಾಹ್ನ ಸುಮಾರು 3: 30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಮತ್ತು ಜನರು ದೊಡ್ಡ ಶಬ್ದ ಕೇಳಿದಾಗ ತಮ್ಮ ಮನೆಗಳಿಂದ ಹೊರಬಂದಿದ್ದಾರೆ.

ಸ್ಫೋಟವು ಎಷ್ಟು ಶಕ್ತಿಯುತವಾಗಿತ್ತೆಂದರೆ ಸಮೀಪದ ಗುರುದ್ವಾರ, ಕಂಪ್ಯೂಟರ್ ಸೆಂಟರ್ ಮತ್ತು ಗ್ಯಾರೇಜ್ ಸೇರಿದಂತೆ ಹತ್ತಿರದ ನಾಲ್ಕು ಕಟ್ಟಡಗಳನ್ನು ಸಹ ಹಾನಿಗೊಳಿಸಿದೆ.

 ಗುರುದ್ವಾರ ನೆಲಅಂತಸ್ತಿನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಸ್ಫೋಟದಿಂದಾಗಿ ಇಟ್ಟಿಗೆಗಳು ಮೈಮೇಲೆ ಬಿದ್ದ ಕಾರಣ ಮಹಿಳೆಯೊಬ್ಬರು ಸಾವನ್ನಪ್ಪಿದರು ಮತ್ತು ಇತರ ನಾಲ್ವರು ಗಾಯಗೊಂಡರು. ಸ್ಫೋಟದಿಂದ ಹತ್ತಿರದಲ್ಲೇ ನಿಲ್ಲಿಸಿದ್ದ ವಾಹನಗಳು ಹಾನಿಗೊಳಗಾದವು ಎಂದು ಪ್ರತ್ಯಕ್ಷದರ್ಶಿ ಸುಖರಾಜ್ ಸಿಂಗ್ ಹೇಳಿದ್ದಾರೆ.

ಬಟಾಲಾ ಪಟ್ಟಣವು ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮ ದಿನಾಚರಣೆಯ ಸಿದ್ದತೆಯಲ್ಲಿದ್ದಾಗಲೇ ಈ ದುರಂತ ಸಂಭವಿಸಿದೆ.

ಕಾರ್ಖಾನೆಯಲ್ಲಿ ಈ ಹಿಂದೆಯೂ ಸ್ಫೋಟ ಸಂಭವಿದ್ದವು. 2017 ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಆಗ ಸ್ಥಳೀಯ ನಿವಾಸಿಗಳು ಈ ಹಿಂದೆ ಜಿಲ್ಲಾಡಳಿತಕ್ಕೆ ಹಲವು ಬಾರಿ  ದೂರುಗಳನ್ನು ಸಲ್ಲಿಸಿ ಕಾರ್ಖಾನೆಯನ್ನು ಮುಚ್ಚುವಂತೆ ಕೋರಿದ್ದರು.

ಈ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಟಲಾ ಪಟಾಕಿ ಕಾರ್ಖಾನೆ ಸ್ಫೋಟದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಟ್ರಿಪ್ ರಾಜಿಂದರ್ ಸಿಂಗ್ ಬಜ್ವಾ ಅವರಿಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ನಿರ್ದೇಶನ ನೀಡಿದರು. ಮೃತರ ಕುಟುಂಬಕ್ಕೆ 2 ಲಕ್ಷ ರೂ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುವಂತೆ ಕ್ಯಾಪ್ಟನ್ ಅಮರಿಂದರ್   ಅವರು ಗುರುದಾಸ್‌ಪುರ ಜಿಲ್ಲೆಯ ಸ್ಥಳೀಯಾಡಳಿತ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News