ಪಡುಬಿದ್ರಿ: ಸಹಕಾರ ಸಂಘಮ ಕಟ್ಟಡ ಉದ್ಘಾಟನೆ

Update: 2019-09-05 13:09 GMT

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವಜ್ರ ಮಹೋತ್ಸವದ ಅಂಗವಾಗಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಹಕಾರ ಸಂಗಮ ಕಟ್ಟಡವನ್ನು ಗುರುವಾರ  ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಮ್.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ಗಳಿಗೆ ಮಾರಕವಾಗುವ ರೀತಿಯಲ್ಲಿ ಆರ್ ಬಿ ಐ ಕೆಲ ನಿಯಮಗಳನ್ನು ಹೇರಲು ಮುಂದಾಗುತ್ತಿದೆ. ವಾಣಿಜ್ಯ ಬ್ಯಾಂಕ್‍ಗಳು ವಿಲೀನವಾದರೂ ಸಹಕಾರಿ ಬ್ಯಾಂಕ್ ಯಾವತ್ತೂ ಮುಚ್ಚುವುದಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ವ್ಯವಹಾರ ನಡೆಸಬೇಕು ಎಂದು ಮನವಿ ಮಾಡಿದರು. 

ರಾಜ್ಯ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಕೆಲ ಧೋರಣೆಗಳು ಸಹಕಾರಿ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸಲು ಕಾರಣವಾಗುತ್ತಿವೆ. ಇಲಾಖೆ ಹಾಗೂ ಸರ್ಕಾರ ಸಹಕಾರಿ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಂಪ್ಯೂಟರ್ ಉದ್ಘಾಟಿಸಿದ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಶೀತಲೀಕೃತ ಘಟಕಕ್ಕೆ ರೂ. 25 ಲಕ್ಷದ ಅಂದಾಜುಪಟ್ಟಿ ತಯಾರಿಸಲಾಗಿದೆ. ಪಡುಬಿದ್ರಿ ಸಿಎ ಬ್ಯಾಂಕ್ ರೂ. 5 ಲಕ್ಷ ನೀಡುವುದಾಗಿ ತಿಳಿಸಿದೆ ಎಂದರು.

ಕೇಂದ್ರ ಸರ್ಕಾರದ ನಿರ್ಧಾರದಿಂದ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬ್ಯಾಂಕ್‍ಗಳ ಸಂಖ್ಯೆ ಕಡಿಮೆ ಮಾಡಿ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಬ್ಯಾಂಕ್‍ಗಳ ಸ್ಥಾಪನೆಗೆ ಕಾರಣವಾದರೂ ಹೆಸರೇ ಇಲ್ಲದಂತೆ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಸೊಸೈಟಿ ಪ್ರಧಾನ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆರೋಪಿಸಿದರು. 

ಭದ್ರತಾ ಕೊಠಡಿಯನ್ನು ಸುಮಲತಾ ಎನ್ ಸುವರ್ಣ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ ಚಂದ್ರ ಡಿ.ಸುವರ್ಣ ಸೇಫ್ ಲಾಕರನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಠೇವಣಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ನಿವೃತ್ತ ಶಿಕ್ಷಕರಾದ ಅನಂತಪಟ್ಟಾಬಿ ರಾವ್, ಸುಧಾಕರ ರಾವ್, ಸಂಜೀವ ಮಾಸ್ತರ್, ರತ್ನಾವತಿ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಮಾಜಿ ಉಪಪ್ರಧಾನ ವ್ಯವಸ್ಥಾಪಕ ಮೋಹನ್‍ದಾಸ್ ಹೆಜ್ಮಾಡಿ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಕುಂದಾಪುರ ವಿಭಾಗದ ಸಹಾಯಕ ಉಪ ನಿಬಂಧಕಿ ಚಂದ್ರಪ್ರತಿಮಾ ಎಮ್.ಜೆ, ಎಸ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ಅಮೀನ್, ತೆಂಕದ ಅರುಣಾಕುಮಾರಿ, ಪಲಿಮಾರಿನ ಜಿತೇಂದ್ರ ಪುಟಾರ್ಡೋ, ತಾಪಂ ಸದಸ್ಯರಾದ ರೇಣುಕಾ ಪುತ್ರನ್, ದಿನೇಶ್ ಕೋಟ್ಯಾನ್, ಕೇಶವ ಮೊಯ್ಲಿ, ರವೀಂದ್ರನಾಥ ಜಿ ಹೆಗ್ಡೆ, ನವೀನಚಂದ್ರ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನಚಂದ್ರ ಜೆ ಶೆಟ್ಟಿ, ಶಬೀರ್ ಹುಸೇನ್, ಭಾಸ್ಕರ ಗಡಿಯಾರ್, ಗುರುರಾಜ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸೊಸೈಟಿ ಅಧ್ಯಕ್ಷ ವೈ. ಸುಧೀರ್‍ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಗಿರೀಶ್ ಪಲಿಮಾರ್ ವಂದಿಸಿದರು. ರಾಜೇಶ್ ಶೇರಿಗಾರ್ ಕರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News