ಬದುಕು ರೂಪಿಸುವ ಶಿಕ್ಷಕರನ್ನು ಗೌರವಿಸೋಣ: ಪ್ರೊ.ಹಂಪ ನಾಗರಾಜಯ್ಯ

Update: 2019-09-05 13:20 GMT

ಕೊಣಾಜೆ: ಅದೆಷ್ಟೋ ಜನರನ್ನು ಅಕ್ಷರಲೋಕಕ್ಕೆ ಕೊಂಡೊಯ್ದು ಬದುಕನ್ನು ರೂಪಿಸುವ ಶಿಕ್ಷಕರನ್ನು ಅಪಮಾನ ಮಾಡದೆ ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ ಎಂದು ಸಾಹಿತಿ ನಾಡೋಜ ಪ್ರೊ.ಹಂಪನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.  

ಅವರು ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಗುರು-ಶಿಷ್ಯ ಸಂಬಂಧಗಳು ಯಾವತ್ತಿಗೂ ಸಿಹಿಯಾಗಿರಬೇಕು. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ಎಂದಿಗೂ ಮರೆಯದೆ ಕೃತಜ್ಞರಾಗಿರಬೇಕು. ಪ್ರಸಕ್ತ ಕಾಲಘಟ್ಟದಲ್ಲಿ ಅದ್ಯಾಪಕನಿಗೆ ಬಹಳಷ್ಟು ಸವಾಲುಗಳು ಎದುರಾಗುತ್ತಿರುವುದನ್ನೂ ನಾವು ಗಮನಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಶಿಕ್ಷಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಅವರು ಬದುಕಿನುದ್ದಕ್ಕೂ ಶಿಕ್ಷಕರೇ ಆಗಿರುತ್ತಾರೆ. ಈ ವೃತ್ತಿ ಎಲ್ಲ ವೃತ್ತಿಗಳಿಗೂ ಮಾತೃ ಸ್ಥಾನವನ್ನು ಹೊಂದಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ ಪೇಟೆಂಟ್ ಪಡೆಯುವ ವಿಷಯದಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ. ಈ ಬಗೆಗೆ ಸಂಶೋಧನಾತ್ಮಕ ಪ್ರಾಧ್ಯಾಪಕರು ಕಾರ್ಯಪ್ರವೃತರಾಗಬೇಕು. ಎಷ್ಟು ಖರ್ಚಾದರೂ ವಿವಿ ಭರಿಸಲಿದ್ದು, ಪೇಟೆಂಟ್ ಪಡೆದವರನ್ನು ವಿವಿ ವತಿಯಿಂದ ವೈಭವಪೂರ್ವಕವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು. 

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿವಿಯ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ.ಶ್ರೀಪತಿ ಕಲ್ಲೂರಾಯ, ಪ್ರೊ.ಕೆ.ವಿ.ವಿಜಯ್ ಕುಮಾರ್, ಪ್ರೊ.ಹನುಮನಾಯಕ್, ಪ್ರೊ.ಶ್ರೀಧರ್ ಅವರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಡೀನ್ ಗಳಾದ ಪ್ರೊ.ಕಿಶೋರಿ ನಾಯಕ್, ಪ್ರೊ.ಶಿವಲಿಂಗಯ್ಯ, ಪ್ರೊ.ಟಿ.ಎನ್.ಶ್ರೀಧರ್, ಪ್ರೊ.ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಸುಮಂಗಲಿ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News