ಕೇಂದ್ರ ಸರಕಾರ ದೇಶವನ್ನು ನಿರುದ್ಯೋಗಿಗಳ ಕಾರ್ಖಾನೆಯನ್ನಾಗಿಸುತ್ತಿದೆ: ನ್ಯಾಯವಾದಿ ಶಿವಕುಮಾರ್ ಎಸ್.ಎಂ

Update: 2019-09-05 14:18 GMT

ಬೆಳ್ತಂಗಡಿ: ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣಗೊಳಿಸಲಾಗುತ್ತಿದ್ದು, ಮತ್ತೊಂದೆಡೆ ಕೈಗಾರಿಕೆ, ಗುಡಿ ಕೈಗಾರಿಕೆಗಳು ಮುಚ್ಚುತ್ತಿದ್ದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ನಿರುದ್ಯೋಗಿಗಳ ಕಾರ್ಖಾನೆಯನ್ನಾಗಿಸುತ್ತಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು. 

ಅವರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ( ಕೆ.ಪಿ.ಆರ್.ಎಸ್) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದ ವಿವಿಧೆಡೆ ಭೀಕರ ನೆರೆ, ಪ್ರವಾಹದಿಂದಾಗಿ ಮನೆ, ಕೃಷಿ ಕಳೆದುಕೊಂಡರೂ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಎರಡೂ ಸರ್ಕಾರಗಳು ಜನರ ಪಾಲಿಗೆ ಸತ್ತಂತಿದೆ ಎಂದರು. ಬೆಳ್ತಂಗಡಿ ತಾಲೂಕಿನಲ್ಲಿ 600 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದ್ದು, ಆದರೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸಕ್ಕೆ ಬಂದಂತೆ ಕಾಟಚಾರಕ್ಕೆ ಭೇಟಿ ನೀಡಿ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದ ಅವರು, ತಕ್ಷಣ ನೆರೆ ಸಂತ್ರಸ್ತರಿಗೆ ಸೂಕ್ತ, ವೈಜ್ಞಾನಿಕ ರೀತಿಯ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ನಡೆಸಬೇಕಾದೀತು ಎಂದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಆಕ್ರಮಣಕಾರಿ ಆರ್ಥಿಕ ನೀತಿಗಳಿಂದ ರೈತ, ಕಾರ್ಮಿಕ, ಕೃಷಿಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರ್ಮಿಕ ವರ್ಗ ಹೋರಾಟದಿಂದ ಪಡೆದ ಸವಲತ್ತುಗಳನ್ನು ಕೇಂದ್ರ ಸರ್ಕಾರ ನಾಶ ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ಮರಣಶಾಸನ ಬರೆಯುತ್ತಿದೆ. ಇದಕ್ಕೆ ಸಿಐಟಿಯು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ ಮಾತನಾಡುತ್ತಾ, ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗಾಗಿ ಸಾರ್ವಜನಿಕರು, ಉದ್ಯಮಿಗಳು, ಸಂಘಸಂಸ್ಥೆಗಳು ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು, ಅಕ್ಕಿ, ಸಾಮಾನುಗಳನ್ನು, ಬಟ್ಟೆಗಳನ್ನು ಶಾಸಕರ ಕಛೇರಿಗೆ ನೀಡಿದ್ದರೂ ಇಂದಿಗೂ ಕೆಲವು ಸಂತ್ರಸ್ತರಿಗೆ ದೊರಕಿಲ್ಲ, ಮತ್ತೊಂದೆಡೆ ಖಾಸಗಿಯಾಗಿ ನೆರೆ ಸಂತ್ರಸ್ತರಿಗೆ ಅನುದಾನ ಸಂಗ್ರಹಿಸಲಾಗುತ್ತಿದ್ದು ಈ ಬಗ್ಗೆ ತಾಲೂಕು ಆಡಳಿತ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು. ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲೂ ಶಾಸಕರು ರಾಜಕೀಯ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರ ತಕ್ಷಣವೇ ತಾಲೂಕಿನ ಪುನರ್ನಿರ್ಮಾಣಕ್ಕಾಗಿ 600 ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸೆಲಿಮೋನ್ ಪುದುವೆಟ್ಟು, ಶಂಕರ್ ಪಡಂಗಡಿ, ಸಿಐಟಿಯುನ ಸುಕನ್ಯಾ ಹೆಚ್, ಪದ್ಮಾವತಿ ಬೆಳ್ತಂಗಡಿ, ಜಯಂತಿ ನೆಲ್ಲಿಂಗೇರಿ, ಸನ್ಮಾಪ್ರಿಯಾ, ಮೀನಾಕ್ಷಿ ಪಡಂಗಡಿ, ನಾರಾಯಣ ಪೂಜಾರಿ ಹೊಸಂಗಡಿ, ಪ್ರಭಾಕರ್ ತೋಟತ್ತಾಡಿ ವಹಿಸಿದ್ದರು. ಉಪ ತಹಶೀಲ್ದಾರ್ ಶಂಕರ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News