×
Ad

ಬಾಲಕಿಗೆ ಲೈಂಗಿಕ ಕಿರುಕುಳ: ಈಜು ಸಂಸ್ಥೆಯ ಕೋಚ್ ವಿರುದ್ಧ ಅತ್ಯಾಚಾರ ಪ್ರಕರಣ

Update: 2019-09-05 20:32 IST

ಪಣಜಿ,ಸೆ.5: ತನ್ನಿಂದ ತರಬೇತಿ ಪಡೆಯುತ್ತಿದ್ದ 15ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಗೋವಾ ಈಜು ಸಂಸ್ಥೆ (ಜಿಎಸ್‌ಎ)ಯ ಕೋಚ್ ಸುರಜಿತ್ ಗಂಗೂಲಿ ವಿರುದ್ಧ ಗುರುವಾರ ಗೋವಾ ಪೊಲೀಸರು ಪೊಕ್ಸೊ ಕಾಯ್ದೆಯಡಿ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗಂಗೂಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಗಮನವನ್ನೂ ಸೆಳೆದಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಎಸ್‌ಎ ಗುರುವಾರ ಗಂಗೂಲಿಯನ್ನು ಹುದ್ದೆಯಿಂದ ವಜಾಗೊಳಿಸಿದೆ. ಗಂಗೂಲಿ ಭೋಪಾಲಕ್ಕೆ ತೆರಳಿದ್ದಾನೆನ್ನಲಾಗಿದ್ದು,ಅವನನ್ನು ಪತ್ತೆ ಹಚ್ಚಲು ಪೊಲೀಸ್ ತಂಡವೊಂದನ್ನು ಅಲ್ಲಿಗೆ ರವಾನಿಸಲಾಗುವುದು ಎಂದು ಮಾಪುಸಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಪಿಲ್ ನಾಯಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗಂಗೂಲಿ ಮತ್ತು ಸಂತ್ರಸ್ತ ಬಾಲಕಿ ಇಬ್ಬರೂ ಪಶ್ಚಿಮ ಬಂಗಾಳದವರಾಗಿದ್ದಾರೆ. ಬುಧವಾರ ಗಂಗೂಲಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೋಲ್ಕತಾ ಪೊಲೀಸರು,ಬಳಿಕ ಗೋವಾ ಪೊಲೀಸರಿಗೆ ವರ್ಗಾಯಿಸಿದ್ದರು.

ಗಂಗೂಲಿ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ರಿಜಿಜು ಭರವಸೆ ನೀಡಿದ್ದಾರೆ. ‘ಈ ಘಟನೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಗಂಗೂಲಿ ಭಾರತದಲ್ಲೆಲ್ಲೂ ಕೋಚ್ ಆಗಿ ನೇಮಕಗೊಳ್ಳದಂತೆ ನೋಡಿಕೊಳ್ಳುವಂತೆ ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಐ)ಕ್ಕೆ ಸೂಚಿಸಲಿದ್ದೇನೆ’ ಎಂದು ಅವರು ಗುರುವಾರ ಟ್ವೀಟಿಸಿದ್ದಾರೆ.

ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಜಿಎಸ್‌ಎಗೆ ಸೂಚಿಸಿರುವುದಾಗಿ ಎಸ್‌ಎಫ್‌ಐ ಅಧ್ಯಕ್ಷ ದಿಗಂಬರ ಕಾಮತ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News