ಉಡುಪಿಯಲ್ಲಿ ಮತ್ತೆ 'ಜಗಳದ ಗೇಟ್' ತೆರೆದ ಪ್ರಮೋದ್ - ರಘುಪತಿ ಭಟ್ ಹೇಳಿದ್ದೇನು?

Update: 2019-09-05 15:13 GMT
ಪ್ರಮೋದ್ ಮಧ್ವರಾಜ್, ರಘುಪತಿ ಭಟ್

ಉಡುಪಿ, ಸೆ.5: ಮಾಜಿ ಶಾಸಕ ಹಾಗೂ ಶಾಲೆಯಲ್ಲಿ ಸಹಪಾಠಿಯಾಗಿದ್ದ ಪ್ರಮೋದ್ ಮಧ್ವರಾಜ್ ಭಾರತೀಯ ಜನತಾ ಪಕ್ಷಕ್ಕೆ ಬರುವುದಿದ್ದಲ್ಲಿ ಅವರಿಗೆ ಆತ್ಮೀಯ ಸ್ವಾಗತವಿದೆ. ಆದರೆ ಇದಕ್ಕಾಗಿ ಅವರು ಮೊದಲು ಅರ್ಜಿ ಹಾಕಿಕೊಳ್ಳಬೇಕು (ಮತದಾರನಾಗಿರುವ ಮಲ್ಪೆ ಬೂತ್‌ನಿಂದ) ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮರಳಿನ ಕುರಿತು ವಿವರಿಸಲು ಕರೆದ ಸುದ್ದಿಗೋಷ್ಠಿಯ ಕೊನೆಯಲ್ಲಿ ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂಬುದು ವೀರಪ್ಪ ಮೊಯ್ಲಿ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅನಂತರವಷ್ಟೇ ಅವರೀಗ ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಈಗ ಅವರು ಬಿಜೆಪಿ ಪಕ್ಷ ಸೇರಲು ಬಯಸಿದರೆ ಅರ್ಜಿ ಹಾಕಿಕೊಳ್ಳಬಹುದು. ಪಕ್ಷ ಅದನ್ನು ಪರಿಶೀಲಿಸಿ ಪರಿಗಣಿಸಬಹುದು ಎಂದು ಹೇಳಿದರು.

ಪ್ರಮೋದ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ಜಿಲ್ಲೆಯಿಂದ ಕೇಂದ್ರದವರೆಗಿನ ಉನ್ನತ ನಾಯಕರು ಸೇರಿ ನಿರ್ಧರಿಸುತ್ತಾರೆ. ಆದರೆ ಸದ್ಯಕ್ಕೆ ಅವರಿಂದ ಯಾವುದೇ ಅರ್ಜಿ ಬಂದಿಲ್ಲ. ಹಿಂದೊಮ್ಮೆ ಅರ್ಜಿ ಹಾಕಿದ್ದೀರಬೇಕು, ಆಗ ಬಿಜೆಪಿ ಗೇಟ್ ಹಾಕಿದೆ ಎಂದು ಹೇಳಿದ್ದರು. ಆದರೆ ಈಗ ಅರ್ಜಿ ಹಾಕಿದ್ರೆ ಗೇಟ್ ಒಪನ್ ಇದೆ, ಹೀಗಾಗಿ ಅವರು ಬಿಜೆಪಿಗೆ ಬರಲು ಯಾವುದೇ ತೊಂದರೆ ಇಲ್ಲ. ಇದಕ್ಕಾಗಿ ಮಲ್ಪೆ ಬೂತಿನಿಂದ ಅರ್ಜಿ ಹಾಕಬೇಕು, ಆ ಬೂತಿನ ಬಿಜೆಪಿ ನಾಯಕರು ತೀರ್ಮಾನ ಮಾಡುತ್ತಾರೆ ಎಂದವರು ನುಡಿದರು.

ಪ್ರಮೋದ್ ಮಧ್ವರಾಜ್ ಬಗ್ಗೆ ನಾವು ಮೊದಲೇ ಭವಿಷ್ಯ ಹೇಳಿದ್ದೆವು. ಲೋಕಸಭಾ ಚುನಾವಣೆಯಲ್ಲಿ ಅವರು ಸೋಲುತ್ತಾರೆ, ಇದೇ ವೇಳೆ ರಾಜ್ಯದಲ್ಲಿ ಮೈತ್ರಿ ಸರಕಾರವೂ ಪತನವಾಗುತ್ತದೆ. ಅದರ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿದ್ದು ಹೋಗುತ್ತದೆ ಎಂದು ಹೇಳಿದ್ದು ನಿಜವಾಗಿದೆ. ಅವರೀಗ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ, ಕಾಂಗ್ರೆಸ್‌ನಲ್ಲಿ ಪ್ರಮೋದ್‌ಗೆ ಇನ್ನೂ ಎಂಟ್ರಿ ಕೊಟ್ಟಿಲ್ಲ ಮುಂದೇನಾಗುತ್ತೆ ಕಾದು ನೋಡೊಣ ಎಂದು ನಗುತ್ತಾ ನುಡಿದರು.

ರಘುಪತಿ ಭಟ್ ನನ್ನ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ: ಪ್ರಮೋದ್
ಈ ನಡುವೆ ಶಾಸಕ ಕೆ.ರಘುಪತಿ ಭಟ್ ತನ್ನ ಕುರಿತು ನೀಡಿದ ವ್ಯಂಗ್ಯಭರಿತ ಹೇಳಿಕೆಗೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಪ್ರಮೋದ್ ಮದ್ವರಾಜ್, ರಘುಪತಿ ಭಟ್ ನನ್ನ ರಾಜಕೀಯ ನಡೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ, ಅದರ ಬದಲು ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಮೋದ್‌ಗೆ ಬಿಜೆಪಿ ಗೇಟ್ ಓಪನ್ ಆಗಿದೆ ಎಂಬ ಭಟ್ಟರ ಹೇಳಿಕೆಗೆ ಪತ್ರಿಕಾ ಹೇಳಿಕೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ರಘುಪತಿ ಭಟ್ ಚುನಾವಣೆಯ ಸಂದರ್ಭದಲ್ಲಿ ಮೋದಿ ಮತ್ತು ಹಿಂದುತ್ವದ ಹೆಸರಿನಲ್ಲಿ ಅನೇಕ ಸುಳ್ಳುಗಳನ್ನು ಹೇಳಿ ಜನರನ್ನು ಮರಳು ಮಾಡಿ ಗೆದ್ದು ಶಾಸಕರಾಗಿದ್ದಾರೆ. ಈವರೆಗೆ ಅವರು ಜನರಿಗೆ ನೀಡಿದ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ವಿಶೇಷವಾಗಿ ತಾನು ಗೆದ್ದ 30 ದಿನಗಳ ಒಳಗೆ ಮರಳುಗಾರಿಕೆ ಪ್ರಾರಂಭ ಮಾಡಿಸುತ್ತೇನೆ ಎಂದು ಹೇಳಿ ಕಳೆದ 15 ತಿಂಗಳುಗಳಿಂದ ಶಾಸಕರಾಗಿ ಮರಳಿನ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ನಾನು ಶಾಸಕನಾಗಿ, ಮಂತ್ರಿಯಾಗಿ ಉಡುಪಿಗೆ ಮಂಜೂರು ಮಾಡಿದ ಕಾಮಗಾರಿಗಳೇ ಮುಂದುವರೆಯುತ್ತಿವೆ ಹೊರತು ಯಾವುದೇ ಹೊಸ ಕಾಮಗಾರಿಯನ್ನು ತಂದಿಲ್ಲ. ಕೆಲವೊಂದು ತಾನು ಮಂಜೂರು ಮಾಡಿದ ಕಾಮಗಾರಿಗಳಿಗೂ ತಡೆಯೊಡ್ಡುವ ಕೆಲಸವನ್ನು ರಘುಪತಿ ಭಟ್ ಮಾಡಿದ್ದಾರೆ. ಅವರಿಗೆ ನನ್ನ ಸಲಹೆ ಏನೆಂದರೆ ಶಾಸಕನಾಗಿ ಅವರು ಈವರೆಗೆ ಸಂಪೂರ್ಣ ವಿಫಲವಾಗಿದ್ದಾರೆ. ಇನ್ನಾದರೂ ಅವರು ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಿ. ನನ್ನ ರಾಜಕೀಯ ನಡೆ ಮತ್ತು ನಿರ್ಧಾರಗಳ ಬಗ್ಗೆ ರಘುಪತಿ ಭಟ್ ಹೆಚ್ಚು ತಲೆಕೆಡಿಸಿಕೊಳ್ಳದೇ ಕ್ಷೇತ್ರದ ಜನತೆ, ಕ್ಷೇತ್ರದ ಅಭಿವೃದ್ಧಿ ಕುರಿತು ತಲೆಕೆಡಿಸಿಕೊಳ್ಳಲಿ ಎಂದವರು ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News