ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲು ಸೇರಿದ್ದಾರೆಯೇ: ಸಚಿವ ಕೋಟ ಪ್ರಶ್ನೆ

Update: 2019-09-05 15:23 GMT

ಉಡುಪಿ, ಸೆ.5: ಮಾಜಿ ಸಚಿವ ಡಿಕೆ ಶಿವಕುಮಾರ್ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೆಯೇ ಅಥವಾ ತುರ್ತುಪರಿಸ್ಥಿತಿ ಎದುರಿಸಿ ಜೈಲು ಸೇರಿದ್ದಾರೆಯೇ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡವಳಿಕೆ ವಿಚಿತ್ರ ಹಾಗೂ ಖಂಡನೀಯವಾಗಿದೆ. ಡಿಕೆಶಿ ಬಂಧನ ಕಾನೂನು ಸಂಬಂಧಿಸಿದ ಪ್ರಕ್ರಿಯೆ. ಇದರ ಬಗ್ಗೆ ಪ್ರತಿಭಟನೆ, ಧರಣಿ ಮಾಡಲು ಕಾಂಗ್ರೆಸ್‌ಗೆ ಸ್ವಾತಂತ್ರವಿದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ ಎಂದರು.

ಈಡಿಯಿಂದ ಡಿಕೆಶಿಗೆ ಅನ್ಯಾಯವಾಗಿದ್ದರೆ ಸುಪ್ರೀಂಕೋರ್ಟ್ ಕದ ತಟ್ಟಬಹುದು. ಅದು ಬಿಟ್ಟು ಪ್ರಧಾನಿ, ಗೃಹಸಚಿವರ ಫೊಟೋ ಸುಡುವ ವರ್ತನೆ ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಈ ಅಸಹ್ಯ ವರ್ತನೆ ಖಂಡನಾರ್ಹ. ಪ್ರಧಾನಿ, ಗೃಹ ಸಚಿವರಿಗೆ ಅವಮಾನ ಮಾಡಿದರೆ, ಪ್ರತಿರೋಧ ಮಾಡುವುದು ನಮಗೂ ಗೊತ್ತು ಎಂದರು.

ಪ್ರತಿಭಟನೆ, ಧರಣಿ ಮಾಡಲು ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಇದೆ. ಆದರೆ ಬಸ್ಸಿಗೆ ಕಲ್ಲು ಹೊಡೆದರೆ, ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಮಾಡಿದರೆ ಸಹಿಸುವುದಿಲ್ಲ. ನಾಗರಿಕ ಸಮಾಜಕ್ಕೆ ನಿಮ್ಮ ವರ್ತನೆ ಶೋಭೆಯಲ್ಲ. ಡಿಕೆಶಿ ಜೈಲಿಗೆ ಹೋಗಲು ಬಿಜೆಪಿ ಅಥವಾ ಸರಕಾರ ಕಾರಣ ಅಲ್ಲ. ಹಿಂದೆ ಜಗನ್, ಜನಾರ್ದನ ರೆಡ್ಡಿ ಬಂಧನ ಆದಾಗ ಹೀಗೆಲ್ಲಾ ಆಗಿತ್ತಾ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News