×
Ad

ಅಸ್ವಸ್ಥ ಸಿಪಿಎಂ ನಾಯಕ ತಾರಿಗಾಮಿಯನ್ನು ಏಮ್ಸ್‌ಗೆ ಸ್ಥಳಾಂತರಿಸಲು ಸುಪ್ರೀಂ ಆದೇಶ

Update: 2019-09-05 21:08 IST

ಹೊಸದಿಲ್ಲಿ,ಸೆ.5: ಶ್ರೀನಗರದಲ್ಲಿ ಬಂಧನದಲ್ಲಿರುವ ಅನಾರೋಗ್ಯ ಪೀಡಿತ ಸಿಪಿಎಂ ನಾಯಕ ಹಾಗೂ ಮಾಜಿ ಶಾಸಕ ಮುಹಮ್ಮದ್ ಯೂಸುಫ್ ತಾರಿಗಾಮಿ ಅವರನ್ನು ತಕ್ಷಣವೇ ದಿಲ್ಲಿಯ ಏಮ್ಸ್‌ಗೆ ಸ್ಥಳಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಆದೇಶಿಸಿದೆ.

ಶ್ರೀನಗರದ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಏಮ್ಸ್‌ನ ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವೇ ಸ್ಥಳಾಂತರವನ್ನು ಕೈಗೊಳ್ಳಬೇಕು ಎಂದೂ ಅದು ತಿಳಿಸಿದೆ.

ತಾರಿಗಾಮಿ ಅವರ ಆರೋಗ್ಯವು ಬಹು ಮುಖ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ತನ್ನ ಆದೇಶದಲ್ಲಿ ಹೇಳಿದೆ.

ಶ್ರೀನಗರದಲ್ಲಿ ತಾರಿಗಾಮಿಯವರನ್ನು ಭೇಟಿಯಾಗಲು ಮತ್ತು ಅವರ ಆರೋಗ್ಯದ ಬಗ್ಗೆ ಅಫಿಡವಿಟ್ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರಿಗೆ ಅನುಮತಿಯನ್ನು ನೀಡಿತ್ತು.

ಯೆಚೂರಿಯವರ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ನೋಟಿಸ್‌ಗಳನ್ನು ಹೊರಡಿಸಿದ ನ್ಯಾಯಾಲಯವು,ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಸೆ.16ಕ್ಕೆ ನಿಗದಿಗೊಳಿಸಲಾಗಿದೆ.

‘ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ತಾರಿಗಾಮಿಯವರ ಬಂಧನವನ್ನು ಪ್ರಶ್ನಿಸುವ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಬಯಸಿದ್ದೇವೆ ’ಎಂದು ಯೆಚೂರಿ ನ್ಯಾಯಾಲಯಕ್ಕೆ ತಿಳಿಸಿದರು.

ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಗರಿಗೆದರಿರುವ ಇತರ ಸಮಸ್ಯೆಗಳನ್ನೂ ಯೆಚೂರಿ ತನ್ನ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದು,ಎಲ್ಲ ವಿಷಯಗಳನ್ನೂ ಸೆ.16ರಂದು ಆಲಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News