ಸೆ.20ರೊಳಗೆ ಜಿಲ್ಲೆಯ ಜನರಿಗೆ ಮರಳು: ರಘುಪತಿ ಭಟ್

Update: 2019-09-05 15:53 GMT

ಉಡುಪಿ, ಸೆ.5: ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ದಲ್ಲಿ ಮರಳುಗಾರಿಕೆ ಸೆ.15ರ ಸುಮಾರಿಗೆ ಪ್ರಾರಂಭಗೊಂಡು 20ರಿಂದ ಜಿಲ್ಲೆಯ ಜನತೆಗೆ ಮರಳು ಲಭ್ಯವಾಗುವ ನಿರೀಕ್ಷೆ ಇದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೀಘ್ರವೇ ಏಳು ಸದಸ್ಯರ ಜಿಲ್ಲಾ ಮರಳು ಸಮಿತಿಯ ಸಭೆ ಕರೆದು ಈ ಕುರಿತು ಚರ್ಚಿಸಿ ಅಂತಿಮ ಆದೇಶ ನೀಡುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸೆ.20ರೊಳಗೆ ಜಿಲ್ಲೆಯ ಜನರಿಗೆ ಈ ಮೊದಲಿನಂತೆ ಮರಳು ಸಿಗುವಂತೆ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ವಿತರಿಸುವ ಕ್ರಮಕ್ಕೆ ಮೂರು ತಿಂಗಳ ರಿಯಾಯಿತಿಯನ್ನು ಕೋರಲಾಗಿದೆ. ಮೂರು ತಿಂಗಳ ಬಳಿಕ ಆ್ಯಪ್‌ನ್ನು ಅಳವಡಿಸಿಕೊಂಡು ಅದರ ಮೂಲಕವೇ ವಿತರಿಸಲು ಒಪ್ಪಿಕೊಳ್ಳಲಾಗಿದೆ. ಸದ್ಯಕ್ಕೆ ಮೊದಲಿನಂತೆ ಮರಳಿನ ವಿತರಣೆ ನಡೆಯಲಿದೆ. ಸಮಿತಿ ಚರ್ಚಿಸಿ ಸಾಧ್ಯವಿದ್ದಷ್ಟು ಕಡಿಮೆ ಮೊತ್ತಕ್ಕೆ ಮರಳು ಸಿಗುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಸಮಿತಿ ಮೂರು ಯುನಿಟ್ ಮರಳಿಗೆ 5,500ರೂ. ನಿಗದಿ ಪಡಿಸುವ ಸಾಧ್ಯತೆ ಇದೆ ಎಂದು ಭಟ್ ತಿಳಿಸಿದರು.

ಜೂನ್‌ನಿಂದ ಸೆಫ್ಟೆಂಬರ್ ಕೊನೆಯವರೆಗೆ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಯನ್ನು ಹಿಂದಿನ ಸರಕಾರ ನಿಷೇಧಿಸಿದ್ದರೂ, ಇದೀಗ ಮೀನುಗಾರಿಕೆ ನಿಷೇಧವಿರುವ ಜೂನ್‌ನಿಂದ ಜು.31ರವರೆಗೆ ಅವಧಿಯಲ್ಲಿ ಮರಳುಗಾರಿಕೆ ನಿಷೇಧವನ್ನು ಸೀಮಿತಗೊಳಿಸಲು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಸರಕಾರ ಈ ಬಗ್ಗೆ ಆದೇಶ ಹೊರಡಿಸಿದೆ. ಹೀಗಾಗಿ ಆಗಸ್ಟ್‌ನಿಂದ ಮರಳುಗಾರಿಕೆ ಪ್ರಾರಂಭಿಸಲು ಆದೇಶವಾಗಿದೆ ಎಂದರು.

ಹೊಸ ಜಿಲ್ಲಾಧಿಕಾರಿಯಾಗಿ ಬಂದಿರುವ ಜಿ.ಜಗದೀಶ್ ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಮಹೇಶ್ವರ ರಾವ್ ಅವರು ಭಾಗವಹಿಸಿದ್ದು, ಅವರು ಸ್ಯಾಂಡ್ ಬಝಾರ್ ಆ್ಯಪ್ ಬಳಕೆಗೆ ಮೂರು ತಿಂಗಳ ವಿನಾಯಿತಿ ನೀಡಲು ಒಪ್ಪಿದ್ದಾರೆ ಎಂದರು.

ಅಲ್ಲದೇ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಮಟ್ಟದ ಸಭೆ ನಡೆಸಿ ಮರಳುಗಾರಿಕೆ ಪ್ರಾರಂಭದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ಸೆ.15ರೊಳಗೆ ಮರಳುಗಾರಿಕೆ ಆರಂಭಿಸಲು ಏಳು ಸದಸ್ಯರ ಸಮಿತಿ ಮೂಲಕ ಆದೇಶ ಹೊರಡಿಸಲು ನಿರ್ಧರಿಸಿದ್ದಾರೆ. ಈ ಹಿಂದೆ ಪರವಾನಿಗೆ ಪಡೆದವರಲ್ಲಿ ಕೇಸು ದಾಖಲಾಗಿ, ಎಫ್‌ಆರ್‌ಐ ಆದ 20-25 ಮಂದಿಗೆ ಈ ಬಾರಿ ಪರವಾನಿಗೆ ನೀಡದಿರಲು ನಿರ್ಧರಿಸಲಾಗಿದೆ. ಉಳಿದೆಲ್ಲರಿಗೂ ಮರಳುಗಾರಿಕೆಗೆ ಅವಕಾಶ ನೀಡಲಾಗುವುದು ಎಂದು ರಘುಪತಿ ಭಟ್ ನುಡಿದರು.

ಕುಂದಾಪುರದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಮರಳುಗಾರಿಕೆಯನ್ನೇ ನಿಷೇಧಿಸಿರುವುದರಿಂದ, ಅದರಲ್ಲಿ ವಿನಾಯಿತಿಯನ್ನು ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಹೊಸ ಆದೇಶವನ್ನು ನಿರೀಕ್ಷಿಸಲಾಗಿದೆ. ಅದೇ ರೀತಿ ನಾನ್ ಸಿಆಫ್‌ಝಡ್ ಪ್ರದೇಶಗಳಲ್ಲಿ ಅ.15ರಿಂದ ಮರಳುಗಾರಿಕೆಗೆ ಕ್ರಮ ಕೈಗೊಳ್ಳಲು ನಿರ್ರಿಸಲಾಗಿದೆ ಎಂದವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಶೀಘ್ರವೇ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.ಅವರು ಸೆ.14ರ ಬಳಿಕ ಭೇಟಿ ನೀಡುವ ನಿರೀಕ್ಷೆ ಇದೆ. ಅವರನ್ನು ಅದ್ದೂರಿಯಾಗಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲದೇ ಕಾರ್ಯಕರ್ತರ ಸಭೆಯೂ ನಡೆಯಲಿದೆ. ಪಕ್ಷದ ಸಾಂಸ್ಥಿಕ ಚುನಾವಣೆಗಳು ಸೆ.11ರಿಂದ ಡಿ.30ರವರೆಗೆ ನಡೆಯಲಿದೆ ಎಂದರು.
ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರಿಧರ ಆಚಾರ್ಯ, ಪ್ರದೀಪ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News