×
Ad

ಬಿಯಾಂಕಾ, ಬೆಲಿಂಡಾ ಸೆಮಿ ಫೈನಲ್‌ಗೆ ಪ್ರವೇಶ

Update: 2019-09-05 23:52 IST

ನ್ಯೂಯಾರ್ಕ್, ಸೆ.5: ಕೆನಡಾದ ಬಿಯಾಂಕಾ ಆ್ಯಂಡ್ರೂಸ್ಕೂ ಹಾಗೂ ಸ್ವಿಸ್‌ನ ಬೆಲಿಂಡಾ ಬೆನ್ಸಿಕ್ ಅಮೆರಿಕ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಇಬ್ಬರು ಆಟಗಾರ್ತಿಯರು ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದ್ದಾರೆ.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ 19ರ ಹರೆಯದ ಬಿಯಾಂಕಾ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್‌ರನ್ನು 3-6, 6-2, 6-3 ಸೆಟ್‌ಗಳಿಂದ ಮಣಿಸುವುದರೊಂದಿಗೆ 2009ರ ಬಳಿಕ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ ಕಿರಿಯ ವಯಸ್ಸಿನ ಆಟಗಾರ್ತಿ ಎನಿಸಿಕೊಂಡರು. 10 ವರ್ಷಗಳ ಹಿಂದೆ ಕರೊಲಿನಾ ವೋಝ್ನಿಯಾಕಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಮೊದಲ ಯುವ ಆಟಗಾರ್ತಿ ಎನಿಸಿಕೊಂಡಿದ್ದರು.

ಬಿಯಾಂಕಾ ಮುಂದಿನ ಸುತ್ತಿನಲ್ಲಿ ಸ್ವಿಟ್ಝರ್ಲೆಂಡ್‌ನ ಬೆನ್ಸಿಕ್‌ರನ್ನು ಎದುರಿಸಲಿದ್ದಾರೆ. 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಮತ್ತೊಂದು ಸೆಮಿ ಫೈನಲ್‌ನಲ್ಲಿ ಉಕ್ರೇನ್‌ನ ಐದನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ.

ಬೆಲಿಂಡಾ ಚೊಚ್ಚಲ ಸೆಮಿ ಫೈನಲ್ ಪ್ರವೇಶ: ಮತ್ತೊಂದು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 13ನೇ ಶ್ರೇಯಾಂಕದ ಬೆಲಿಂಡಾ ಕ್ರೊಯೇಶಿಯದ ಡೊನ್ನಾ ವೆಕಿಕ್‌ರನ್ನು 7-6(7/5), 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿ ಫೈನಲ್‌ಗೆ ಪ್ರವೇಶಿಸಿದರು.

 ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ವೆಕಿಕ್ ಅವರು ಬೆಲಿಂಡಾಗೆ ಸೋಲಿನ ರುಚಿ ಉಣಿಸಿದ್ದರು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡ ಬೆಲಿಂಡಾ 4 ಪಂದ್ಯಗಳಲ್ಲಿ 3ನೇ ಜಯ ದಾಖಲಿಸಿದರು. ಸೆಮಿ ಫೈನಲ್‌ನಲ್ಲಿ ಮೊದಲ ಬಾರಿ ಬಿಯಾಂಕಾ ಸವಾಲು ಎದುರಿಸಲು ಸಜ್ಜಾಗಿದ್ದಾರೆ.

ಬೆನ್ಸಿಕ್ 2014ರ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದೀಗ ಮೊದಲ ಬಾರಿ ಸೆಮಿ ಫೈನಲ್‌ಗೆ ಪ್ರವೇಶಿಸುವುದರೊಂದಿಗೆ 2016ರ ಜೂನ್ ಬಳಿಕ ಮೊದಲ ಬಾರಿ ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ-10ಕ್ಕೆ ವಾಪಸಾಗಲು ಎದುರು ನೋಡುತ್ತಿದ್ದಾರೆ.

ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಬೆನ್ಸಿಕ್ 328ನೇ ರ್ಯಾಂಕಿಗೆ ಕುಸಿದಿದ್ದರು. 2017ರಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷ 55ನೇ ರ್ಯಾಂಕಿನೊಂದಿಗೆ ತನ್ನ ಹೋರಾಟ ಆರಂಭಿಸಿದ್ದ 22ರ ಹರೆಯದ ಬೆನ್ಸಿಕ್ ದುಬೈನಲ್ಲಿ ಫೆಬ್ರವರಿಯಲ್ಲಿ ವೃತ್ತಿಜೀವನದ ಮೂರನೇ ಡಬ್ಲುಟಿಎ ಪ್ರಶಸ್ತಿ ಜಯಿಸಿದರು. ಬೆನ್ಸಿಕ್ ಟೂರ್ನಿಯ ಮೂರನೇ ಸುತ್ತಿನಲ್ಲಿ ವಾಕ್‌ಓವರ್ ಪಡೆದಿದ್ದರು. ನಾಲ್ಕನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್, ಅಗ್ರ ಶ್ರೇಯಾಂಕದ ಆಟಗಾರ್ತಿ ನವೊಮಿ ಒಸಾಕಾರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News