''ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ'': ಐಎಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

Update: 2019-09-06 07:12 GMT

ಮಂಗಳೂರು, ಸೆ.6: ದ.ಕ. ಜಿಲ್ಲಾಧಿಕಾರಿಯಾಗಿರುವ ಎಸ್.ಸಸಿಕಾಂತ್ ಸೆಂಥಿಲ್ ಅವರು ಐಎಎಸ್ ಸೇವೆಗೆ ಹಠಾತ್ ರಾಜೀನಾಮೆ ಸಲ್ಲಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿರುವ ಸಸಿಕಾಂತ್ ಸೆಂಥಿಲ್, ತನ್ನ ರಾಜೀನಾಮೆಗೆ ಯಾವುದೇ ವ್ಯಕ್ತಿ ಅಥವಾ ಸದ್ಯ ತಾನು ಸೇವೆ ಸಲ್ಲಿಸುತ್ತಿರುವ ದ.ಕ. ಜಿಲ್ಲಾಧಿಕಾರಿ ಅವಧಿಯಲ್ಲಿನ ಯಾವುದೇ ಘಟನೆ ಕಾರಣವಲ್ಲ ಎಂದು ತಿಳಿಸಿದ್ದಾರೆ.

“ನಮ್ಮ ವೈವಿಧ್ಯ ಪ್ರಜಾಪ್ರಭುತ್ವದ ಮೂಲಭೂತ ರಚನೆಗಳ ಜೊತೆ ಹಿಂದೆಂದೂ ಕಂಡಿರದ ರೀತಿಯಲ್ಲಿ ರಾಜಿ ಮಾಡಿಕೊಳ್ಳುವಾಗ ನಾಗರಿಕ ಸೇವೆಯಲ್ಲಿ ಮುಂದುವರಿಯುವುದು ನನಗೆ ಅನೈತಿಕವೆಂದು ಎನಿಸಿದ ಕಾರಣ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೂಲ ಚೌಕಟ್ಟುಗಳು ಅತ್ಯಂತ ಕಷ್ಟಕರ ಸವಾಲುಗಳನ್ನು ಎದುರಿಸಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ ನಾನು ಐಎಎಸ್ ನಿಂದ ಹೊರಬಂದು ನನ್ನ ಕೆಲಸ ಮುಂದುವರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ" ಎಂದವರು ತಿಳಿಸಿದ್ದಾರೆ.

''ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿರುವುದು ಹೌದು. ರಾಜೀನಾಮೆ ಪ್ರತಿ ನನ್ನ ಕೈಗೂ ಸೇರಿದೆ'' ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ದೃಢೀಕರಿಸಿದ್ದಾರೆ.

2017ರ ಅಕ್ಟೋಬರ್ ನಿಂದ ಅವರು ದ.ಕ. ಜಿಲ್ಲಾಧಿಕಾರಿಯಾಗಿ ಸೇವೆಯಲ್ಲಿದ್ದರು. ಜಿಲ್ಲೆಯಲ್ಲಿ ಕಳೆದ ವರ್ಷದ ಭೀಕರ ಮಳೆ, ಈ ವರ್ಷದ ಪ್ರವಾಹ, ಅತಿವೃಷ್ಟಿ, ಡೆಂಗ್ ಹಾವಳಿ, ಮರಳು ಮತ್ತಿತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News