ಆಟೊಮೊಬೈಲ್ ಕ್ಷೇತ್ರದ ಬಿಕ್ಕಟ್ಟು: ಅಶೋಕ್ ಲೇಲ್ಯಾಂಡ್‍ ನ 5 ದಿನಗಳ ಉತ್ಪಾದನೆ ಸ್ಥಗಿತ

Update: 2019-09-06 10:47 GMT

ಚೆನ್ನೈ, ಸೆ.6: ಇಂದು, ಸೆಪ್ಟೆಂಬರ್ 6ರಿಂದ ಆರಂಭಗೊಂಡು ಐದು ದಿನಗಳ ಕಾಲ ಚೆನ್ನೈ ಸಮೀಪದ ಎನ್ನೋರ್ ನಲ್ಲಿರುವ ತನ್ನ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಎಂದು ವಾಣಿಜ್ಯ ವಾಹನ ತಯಾರಕಾ ಸಂಸ್ಥೆ ಅಶೋಕ್ ಲೇಲ್ಯಾಂಡ್ ಹೇಳಿದೆ.

ಆಟೋಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ನಡುವೆ ಈ ಸುದ್ದಿ ಹೊರ ಬಿದ್ದಿದೆ. ಕಳೆದ ತಿಂಗಳು 10 ದಿನ ಉತ್ಪಾದನಾ ಕಾರ್ಯವನ್ನು ಈ ಘಟಕ ಸ್ಥಗಿತಗೊಳಿಸಿತ್ತು. ಆಗಸ್ಟ್ ತಿಂಗಳಲ್ಲಿ ಅಶೋಕ್ ಲೇಲ್ಯಾಂಡ್ ಕಂಪೆನಿಯ ಮಧ್ಯಮ ಗಾತ್ರದ ಮತ್ತು ಘನ ವಾಣಿಜ್ಯ ವಾಹನಗಳ ಮಾರಾಟ ಶೇ.70ರಷ್ಟು ಕುಸಿದಿರುವುದೇ ಈ ಆತಂಕಕಾರಿ ಬೆಳವಣಿಗೆಗೆ ಕಾರಣ.

ಇಂದಿನಿಂದ ಆರಂಭಗೊಂಡಿರುವ ಐದು ದಿನಗಳ ಉತ್ಪಾದನಾ ಸ್ಥಗಿತವು ಕಾರ್ಖಾನೆಯ ಸುಮಾರು 3,000 ಗುತ್ತಿಗೆ ಕಾರ್ಮಿಕರೂ ಒಳಗೊಂಡಂತೆ 5,000 ಕಾರ್ಮಿಕರನ್ನು ಬಾಧಿಸಲಿದೆ. ಈ ಐದು ದಿನಗಳ ವೇತನ ಕುರಿತಂತೆ ಕಂಪೆನಿ ಮುಂದೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕಂಪೆನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ಆಡಳಿತ ಮಂಡಳಿ ತನ್ನ ಉದ್ಯೋಗಿಗಳಿಗೆ ಹೇಳಿದೆಯೆನ್ನಲಾಗಿದೆ.

ಆಗಸ್ಟ್ ತಿಂಗಳಲ್ಲಿ  ಕಂಪೆನಿಯ ಬಸ್ಸುಗಳೂ ಸೇರಿದಂತೆ ಘನ ವಾಣಿಜ್ಯ ವಾಹನಗಳ ಮಾರಾಟ ಶೇ. 63ರಷ್ಟು ಕುಸಿದು ಈ ಹಿಂದಿನ ವರ್ಷ ಇದೇ ಅವಧಿಯಲ್ಲಿದ್ದ  12,420 ಸಂಖ್ಯೆಗೆ ಹೋಲಿಸಿದಾಗ 4,585ಗೆ ಇಳಿದಿದೆ.  ಲಘು ವಾಣಿಜ್ಯ ವಾಹನಗಳ ಮಾರಾಟ ಶೇ. 12ಕ್ಕೆ ಕುಸಿದಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 4,208 ಲಘು ವಾಣಿಜ್ಯ ವಾಹನಗಳು ಮಾರಾಟವಾಗಿದ್ದರೆ ಈ ಆಗಸ್ಟ್ ತಿಂಗಳಲ್ಲಿ 3,711  ವಾಹನಗಳು ಮಾರಾಟವಾಗಿವೆ. ಒಟ್ಟಾರೆಯಾಗಿ ಮಾರಾಟ ಪ್ರಮಾಣ ಶೇ. 50ರಷ್ಟು ಕುಸಿದಿದ್ದು, ಆಗಸ್ಟ್ 2018ರಲ್ಲಿ 16,628 ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ 8,296 ವಾಹನಗಳು ಮಾರಾಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News