ಮಿತ್ತೂರು: ಕಾಲೇಜ್ ಬಸ್- ಆಡು ಸಾಗಾಟ ಲಾರಿ ಢಿಕ್ಕಿ; 15ಕ್ಕೂ ಹೆಚ್ಚು ಆಡುಗಳು ಬಲಿ

Update: 2019-09-06 16:22 GMT

ಬಂಟ್ವಾಳ, ಸೆ. 6: ಕಾಲೇಜ್ ಬಸ್ ಹಾಗೂ ಆಡು ಸಾಗಟದ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಿತ್ತೂರು ರೈಲ್ವೇ ಸಮೀಪದ ಕೂವೆತ್ತಿಲ ತಿರುವಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಘಟನೆಯಿಂದ ಇಲ್ಲಿನ ಪಾಟ್ರಕೋಡಿ ನಿವಾಸಿ, ಕಾಲೇಜ್ ಬಸ್ ಚಾಲಕ ಖಾದರ್, ಶಿಕ್ಷಕಿ ಹಾಗೂ ಲಾರಿ ಚಾಲಕನಿಗೆ ಗಾಯವಾಗಿದೆ. 15ಕ್ಕೂ ಹೆಚ್ಚು ಆಡುಗಳು ಬಲಿಯಾಗಿದ್ದು, ಪುತ್ತೂರು ಕುಂಬ್ರದ ಮರ್ಕಝ್ ಹುದಾ ಮಹಿಳಾ ಕಾಲೇಜಿಗೆ ಸೇರಿದ ಬಸ್‍ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:
ಇಂದು ಸಂಜೆ ಪುತ್ತೂರು ಕುಂಬ್ರದ ಮರ್ಕಝ್ ಹುದಾ ಮಹಿಳಾ ಕಾಲೇಜಿಗೆ ಸೇರಿದ ಶಾಲಾ ಬಸ್ ನೇರಳಕಟ್ಟೆಯ ಪಾಟ್ರಕೋಡಿಗೆ ಮಕ್ಕಳನ್ನು ಬಿಡಲೆಂದು ಹೋಗುತ್ತಿದ್ದಾಗ ಮಾಣಿಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕುರಿ ಹಾಗೂ ಆಡುಗಳನ್ನು ತುಂಬಿದ ಲಾರಿಯು ತಿರುವುವಿನಲ್ಲಿ ನಿಯಂತ್ರಣ ಕಳೆದುಕೊಂಡು ಬಸ್‍ಗೆ ಮುಖಾಮುಖಿ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಕಾಲೇಜು ಬಸ್, ಲಾರಿ ಚಾಲಕ ಹಾಗೂ ಶಿಕ್ಷಕಿಗೆ ಗಾಯವಾಗಿದೆ. ಕಾಲೇಜ್ ಬಸ್‍ಗೆ ಕೊನೆಯ ನಿಲುಗಡೆಯಾಗಿದ್ದ ಕಾರಣ ಐದಾರು ಮಂದಿ ವಿದ್ಯಾರ್ಥಿಗಳು ಮಾತ್ರ ಇದ್ದರೆನ್ನಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಲಾರಿ ಚಾಲಕ ಗುಜರಾತ್ ಮೂಲದವರಾಗಿದ್ದು, ಸುಮಾರು 170 ಕುರಿ-ಆಡುಗಳು ಈ ಲಾರಿಯಲ್ಲಿದ್ದವು. ಢಿಕ್ಕಿಯ ರಭಸಕ್ಕೆ 15ಕ್ಕೂ ಅಧಿಕ ಆಡುಗಳು ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ.

ಘಟನೆಯಿಂದ ಶಾಲಾ ಬಸ್‍ನ ಮುಂಭಾಗ ನಜ್ಜುಗುಜ್ಜಾಗಿದ್ದು, ಲಾರಿಯ ಹಿಂಭಾಗವು ಜಖಂಗೊಂಡಿದೆ.ಘಟನೆಯ ಬಳಿಕ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳೀಯರ ಸಹಕಾರದಿಂದ ವಿಟ್ಲ ಪೊಲೀಸರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಡುಗಳನ್ನು ತೆರವುಗೊಳಿಸಿದರು. ಉಳಿದ ಆಡುಗಳನ್ನು ಇನ್ನೊಂದು ವಾಹನದ ಮೂಲಕ ಪುತ್ತೂರಿಗೆ ಸಾಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News