ಪೊಲೀಸ್ ಠಾಣೆಯಲ್ಲಿ ಗ್ಯಾಂಗಿನ ಸದಸ್ಯರಿಂದ ಗುಂಡು ಹಾರಾಟ: ಕುಖ್ಯಾತ ಕ್ರಿಮಿನಲ್ ಪರಾರಿ

Update: 2019-09-06 14:33 GMT

ಜೈಪುರ,ಸೆ.6: ಆಲ್ವಾರ್ ಜಿಲ್ಲೆಯ ಬೆಹ್ರೂರ್ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಿಗ್ಗೆ ನುಗ್ಗಿದ್ದ ತನ್ನ ಗ್ಯಾಂಗಿನ ಸದಸ್ಯರಿಂದ ಗುಂಡು ಹಾರಾಟಗಳ ನಡುವೆಯೇ ಪೊಲೀಸರ ವಶದಲ್ಲಿದ್ದ ಹರ್ಯಾಣದ ಕುಖ್ಯಾತ ಕ್ರಿಮಿನಲ್ ವಿಕ್ರಮ ಗುಜ್ಜರ್ ಅಲಿಯಾಸ್ ಪಾಪ್ಲಾ (28) ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಶುಕ್ರವಾರ ನಸುಕಿನಲ್ಲಿ ಗುಜ್ಜರ್ ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿದ ಗಸ್ತುನಿರತ ಪೊಲೀಸರು ತಪಾಸಣೆ ನಡೆಸಿದಾಗ 31.90 ಲ.ರೂ.ನಗದು ಹಣ ಪತ್ತೆಯಾಗಿತ್ತು. ತಪಾಸಣೆಯ ಸಂದರ್ಭ ಗುಜ್ಜರ್ ಜೊತೆಯಲ್ಲಿದ್ದ ಇತರರು ಪರಾರಿಯಾಗಿದ್ದು,ಪೊಲೀಸರು ಆತನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು.

ಠಾಣೆಯಲ್ಲಿ ಗುಜ್ಜರ್‌ ನ ವಿಚಾರಣೆ ನಡೆಸುತ್ತಿದ್ದಾಗ ಅಲ್ಲಿಗೆ ನುಗ್ಗಿದ ಸುಮಾರು 10-15 ಜನರು ಗುಂಡುಗಳ ಸುರಿಮಳೆಗೈದು,ಆತನನ್ನು ಕರೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ನೆರೆಯ ಹರ್ಯಾಣದ ಮಹೇಂದ್ರಗಡ ನಿವಾಸಿಯಾಗಿರುವ ಗುಜ್ಜರ್ ಐದು ಕೊಲೆ ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿಯಾಗಿದ್ದು,ತನ್ನ ತಲೆಯ ಮೇಲೆ ಐದು ಲ.ರೂ.ಗಳ ಬಹುಮಾನವನ್ನು ಹೊತ್ತಿದ್ದಾನೆ. ಎರಡು ವರ್ಷಗಳ ಹಿಂದೆ ಗುಜ್ಜರ್‌ನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತಂದಿದ್ದ ಸಂದರ್ಭದಲ್ಲಿ ಇದೇ ರೀತಿ ಗುಂಡು ಹಾರಾಟ ನಡೆಸಿದ್ದ ಗ್ಯಾಂಗಿನ ಸದಸ್ಯರು ಆತನೊಂದಿಗೆ ಪರಾರಿಯಾಗುವಲ್ಲಿ ಸಫಲರಾಗಿದ್ದರು. ಅಂದಿನಿಂದಲೂ ಪೊಲೀಸರು ಆತನಿಗಾಗಿ ಬೇಟೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News