ದ.ಕ ಜಿಲ್ಲಾಧಿಕಾರಿಗಳ ರಾಜೀನಾಮೆಯನ್ನು ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

Update: 2019-09-06 15:23 GMT

ಮಂಗಳೂರು, ಸೆ.6: ದ.ಕ. ಜಿಲ್ಲೆಯ ನಿಷ್ಠಾವಂತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆಯು ದಿಗ್ಭ್ರಮೆ ಮೂಡಿಸಿದ್ದು, ರಾಜೀನಾಮೆ ವಾಪಸ್ ಪಡೆದು ಅಧಿಕಾರ ಮುಂದುವರಿಸಲು ಎಸ್‌ಡಿಪಿಐ ಜಿಲ್ಲಾ ಸಮಿತಿ ಆಗ್ರಹಿಸಿದೆ.

ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಐಎಎಸ್ ಸೇವೆಗೆ ರಾಜೀನಾಮೆ ಸಲ್ಲಿಸಿರುವುದರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಜಿಲ್ಲಾ ಸಮಿತಿಯು, ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿವೆ. ನಿಷ್ಠಾವಂತ ಅಧಿಕಾರಿಗಳಿಗೆ ಉಸಿರುಗಟ್ಟುವ ವಾತಾವರಣವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಜಾಯೀದ್ ಮಲಾರ್ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಪ್ರಜೆಗಳು ಸುಶಿಕ್ಷಿತವಾಗಿ ರಕ್ಷಣೆ ಪಡೆಯಬಹುದಾಗಿದೆ. ಭಾರತ ಬಲಿಷ್ಠ ದೇಶ. ಯುವ ಜನಾಂಗ ಹೊಂದಿದ ಹೆಗ್ಗಳಿಕೆ ದೇಶದ್ದು. ಆದರೆ, ಇಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಜೈಕಾರ ಕೂಗುತ್ತಿರುವುದು ಕಾಣುತ್ತಿದೆ ಎಂದರು.

ವೈಯಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ವ್ಯವಸ್ಥೆಯಲ್ಲಿನ ಹಲವು ಅಡೆತಡೆಗಳು ಅವರ ನಿರ್ಧಾರಕ್ಕೆ ಕಾರಣಗಳಾಗಿವೆ. ಜಿಲ್ಲಾಧಿಕಾರಿ ರಾಜೀನಾಮೆ ನೀಡಿರುವುದು ಜಿಲ್ಲೆಯ ಜನತೆಯ ದುರದೃಷ್ಟವಾಗಿದೆ. ಸರ್ವಾಧಿಕಾರಿ ಪ್ರವೃತ್ತಿಗೆ ಜೈಕಾರ ಕೂಗುವ ಸನ್ನಿವೇಶಗಳು ದೇಶದಲ್ಲಿ ಕಂಡುಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಿಷ್ಠಾವಂತ ಅಧಿಕಾರಿಗಳು ನಾಗರಿಕ ಜನ ಸೇವೆಯಿಂದ ಹಿಂದೆ ಸರಿಯುತ್ತಿದ್ದಾರೆ. ದೇಶದಲ್ಲಿ ಫ್ಯಾಸಿಸ್ಟ್ ಆಳ್ವಿಕೆ ಹೆಚ್ಚುತ್ತಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇಂತಹ ವಿಷಮಸ್ಥಿತಿಯಲ್ಲಿ ದೇಶ ಹಾಗೂ ಜಿಲ್ಲೆಗೆ ಸಸಿಕಾಂತ್ ಸೆಂಥಿಲ್ ಅವರಂತಹ ದಕ್ಷ ಅಧಿಕಾರಿ ಅಗತ್ಯವಿದೆ ಎಂದು ಹೇಳಿದರು.

ರಾಜಕೀಯ ಪ್ರೇರಿತ ಬಂಧನಗಳು, ದ್ವೇಷ ರಾಜಕೀಯ ದಿನದಿಂದ ದಿನಕ್ಕೆ ಅವ್ಯಾಹತವಾಗಿ ಮುಂದುವರಿಯುತ್ತಿವೆ. ಇಂತಹ ಜನವಿರೋಧಿ ನೀತಿ ವಿರುದ್ಧ ದನಿ ಎತ್ತುತ್ತಿರುವುದು ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಅಧಿಕಾರಕ್ಕೆ ಬರಲು ಯಾವುದೇ ಅರ್ಹತೆ ಇಲ್ಲದವರನ್ನು ಮತ ನೀಡಿ ಆರಿಸಲಾಗುತ್ತಿದೆ. ದೇಶ ಅಪಾಯದ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜ್ಞಾವಂತ ನಾಗರಿಕರು ಹೋರಾಟ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿಯ ಸದಸ್ಯರಾದ ಸುಹೈಲ್‌ಖಾನ್, ಮುನೀಬ್ ಬೆಂಗ್ರೆ, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ನಿಜಾಮ್ ಉಳ್ಳಾಲ, ಕೌನ್ಸಿಲರ್ ರಮೀಜ್ ಉಳ್ಳಾಲ, ಮುಷರಫ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News