ವಿಪರೀತ ವರ್ಗಾವಣೆಗೆ ರೋಸಿಹೋಗಿ ಅಧಿಕಾರಿಗಳಿಂದ ರಾಜೀನಾಮೆ: ಯು.ಟಿ.ಖಾದರ್

Update: 2019-09-06 18:34 GMT

ಮಂಗಳೂರು, ಸೆ.6: ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿಪರೀತ ವರ್ಗಾವಣೆಗೆ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಇದಕ್ಕೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಜ್ವಲಂತ ನಿದರ್ಶನವಾಗಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಶಾಸಕರು, ಜಿಲ್ಲಾಧಿಕಾರಿ ಸಸಿಕಾಂತ್ ರಾಜೀನಾಮೆ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದೇನೆ. ರಾಜೀನಾಮೆ ಹಿಂದೆಗೆದುಕೊಳ್ಳುವಂತೆ ಸಸಿಕಾಂತ್ ಸೆಂಥಿಲ್ ಅವರನ್ನು ಮನವೊಲಿಸುವಂತೆ ಮುಖ್ಯ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದೇನೆ ಎಂದರು.

ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಮೇಲಿಂದ ಮೇಲೆ ಅಧಿಕಾರಿಗಳ ವರ್ಗಾವಣೆ ಪರ್ವ ಇನ್ನಿಲ್ಲದಂತೆ ಮುಂದುವರಿದಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಉಡುಪಿ ಜಿಲ್ಲಾಧಿಕಾರಿ, ದ.ಕ. ಜಿಲ್ಲೆಯ ಹೌಸಿಂಗ್ ಬೋರ್ಡ್‌ನ ಅಧಿಕಾರಿ ಸೇರಿದಂತೆ ಇನ್ನು ಅಸಂಖ್ಯಾತ ಸಂಖ್ಯೆಯಲ್ಲಿ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಯಾವುದೇ ಅಧಿಕಾರಿ ರಾಜೀನಾಮೆ ಸಲ್ಲಿಸುವ ಆಲೋಚನೆ ಮಾಡುತ್ತಾರೆಂದರೆ, ಅಂಥವರು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣವಿಲ್ಲ ಎನ್ನುವುದು ಇದರಿಂದ ಖಾತರಿಯಾಗುತ್ತದೆ. ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡಲು ಬಿಟ್ಟರೆ ಯಾರೂ ಹುದ್ದೆಯನ್ನು ತ್ಯಜಿಸುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಸಂದರ್ಭ ಸಸಿಕಾಂತ್ ಸೆಂಥಿಲ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಸೆಂಥಿಲ್ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ದಕ್ಷ ಅಧಿಕಾರಿಯಾಗಿದ್ದ ಅವರು ಜನರ ಭಾವನೆಗಳನ್ನು ಅರಿತುಕೊಂಡಿದ್ದರು ಎಂದರು.

ತಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾಧಿಕಾರಿ ಜತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೆವು. ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ‘ಸ್ಯಾಂಡ್ ಬಝಾರ್’, ಸಕ್ರಮ ದನ ಸಾಗಾಟ ಆ್ಯಪ್ ಸೇರಿದಂತೆ ವಿವಿಧ ಮಾದರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಯಶಸ್ವಿಯಾಗಿದ್ದರು ಎಂದು ಜಿಲ್ಲಾಧಿಕಾರಿಯ ಕಾರ್ಯ ವೈಖರಿಯನ್ನು ಶಾಸಕ ಯು.ಟಿ.ಖಾದರ್ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News